ಟೊರೊಂಟೊ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿ | ಗಾಯದಿಂದಾಗಿ ಹಿಂದೆ ಸರಿದ ಬೆಲಿಂಡಾ: ಕೋಕೊ ಗೌಫ್ ಸೆಮಿಫೈನಲ್ಗೆ

ಕೋಕೊ ಗೌಫ್ | Photo Credit : PTI
ಟೊರೊಂಟೊ, ಆ. 12: ಡಬ್ಲ್ಯುಟಿಎ ಟೊರೊಂಟೊ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಮಂಗಳವಾರ ಬೆಲಿಂಡಾ ಬೆನ್ಸಿಕ್ ಸೊಂಟದ ಗಾಯದ ಕಾರಣದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ, ನಾಲ್ಕನೇ ವಿಶ್ವ ರ್ಯಾಂಕಿಂಗ್ನ ಕೋಕೊ ಗೌಫ್ ವಾಕ್ಓವರ್ ಪಡೆದು ಸೆಮಿಫೈನಲ್ ಪ್ರವೇಶಿಸಿದ್ದಾರೆ.
22 ವರ್ಷದ ಅಮೆರಿಕದ ಗೌಫ್, ನಾಲ್ಕು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಜಪಾನ್ನ ನವೋಮಿ ಒಸಾಕಾ ಮತ್ತು ಎರಡನೇ ವಿಶ್ವ ರ್ಯಾಂಕಿಂಗ್ನ ಕಝಖ್ಸ್ತಾನದ ಎಲೆನಾ ರೈಬಾಕಿನಾ ನಡುವಿನ ಪಂದ್ಯದ ವಿಜೇತರ ವಿರುದ್ಧ ಫೈನಲ್ ಪ್ರವೇಶಕ್ಕಾಗಿ ಸೆಣಸಲಿದ್ದಾರೆ.
14ನೇ ವಿಶ್ವ ರ್ಯಾಂಕಿಂಗ್ನ ಸ್ವಿಟ್ಸರ್ಲ್ಯಾಂಡ್ನ ತಾರೆ 29 ವರ್ಷದ ಬೆನ್ಸಿಕ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಬೆನ್ಸಿಕ್ ಇದುವರೆಗೆ ಯಾವುದೇ ಗ್ರ್ಯಾನ್ಸ್ಲಾಮ್ ಫೈನಲ್ ತಲುಪಿಲ್ಲ.
ಈ ತಿಂಗಳ ಕೊನೆಯಲ್ಲಿ ಯುಎಸ್ ಓಪನ್ ಪ್ರಾರಂಭವಾಗಲಿದ್ದು, ಇದು ಅವರಿಗೆ ದೊಡ್ಡ ಹಿನ್ನಡೆಯಾಗಿದೆ.
ಡಬ್ಲ್ಯುಟಿಎ ಪಂದ್ಯಗಳಲ್ಲಿ ಬೆನ್ಸಿಕ್ ವಿರುದ್ಧ 6-2 ರ ಒಟ್ಟಾರೆ ಗೆಲುವು-ಸೋಲು ದಾಖಲೆ ಹೊಂದಿರುವ ಗೌಫ್, ಈ ವರ್ಷ ವಿಂಬಲ್ಡನ್ನ ನಾಲ್ಕನೇ ಸುತ್ತಿನಲ್ಲಿ ಮತ್ತು ಮಯಾಮಿ ಕ್ವಾರ್ಟರ್ಫೈನಲ್ನಲ್ಲಿ ಅವರನ್ನು ಸೋಲಿಸಿದ್ದರು.






