ಅಮಾನತು ಆದೇಶ ತಡೆಹಿಡಿಯುವಂತೆ ಕ್ರೀಡಾ ಸಚಿವಾಲಯಕ್ಕೆ TTFI ಮನವಿ

ಸಾಂದರ್ಭಿಕ ಚಿತ್ರ | Photo Credit : magnific.com
ಹೊಸದಿಲ್ಲಿ, ಆ. 13: ಭಾರತೀಯ ಟೇಬಲ್ ಟೆನಿಸ್ ಫೆಡರೇಶನ್ (TTFI)ನ ಅಮಾನತು ಆದೇಶವನ್ನು ತಡೆಹಿಡಿಯುವಂತೆ ಹಾಗೂ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅದರ ಅಧ್ಯಕ್ಷೆ ಮೇಘನಾ ಅಹ್ಲಾವತ್ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (IOA) ಮೂಲಕ ಏರ್ಪಡಿಸಲಾಗುವ ಮಧ್ಯಂತರ ಆಡಳಿತ ವ್ಯವಸ್ಥೆಯ ಪರಿಣಾಮಗಳ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಚಿವಾಲಯವು ತಕ್ಷಣದಿಂದ ಜಾರಿಗೆ ಬರುವಂತೆ ಫೆಡರೇಶನ್ ನ ಮಾನ್ಯತೆಯನ್ನು ಅಮಾನತುಗೊಳಿಸಿದ ಒಂದು ದಿನದ ಬಳಿಕ, ಅಂದರೆ ಗುರುವಾರ ಹೊರಡಿಸಿದ ಹೇಳಿಕೆಯಲ್ಲಿ ಅಹ್ಲಾವತ್ ಈ ಆಗ್ರಹವನ್ನು ಮಾಡಿದ್ದಾರೆ.
ಸಚಿವಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಕಳವಳಗಳಿಗೆ ಈಗಾಗಲೇ ಪರಿಹಾರ ಕಂಡುಕೊಳ್ಳಲಾಗಿದೆ ಅಥವಾ ಅವುಗಳಿಗೆ ಹೆಚ್ಚಿನ ವಿವರಣೆಯ ಅಗತ್ಯವಿದೆ ಎಂಬುದಾಗಿ ಫೆಡರೇಶನ್ ನಂಬಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಚಿವಾಲಯದ ಆದೇಶವನ್ನು ಫೆಡರೇಶನ್ ಒಪ್ಪಿಕೊಂಡಿದೆಯಾದರೂ, ಫೆಡರೇಶನ್ ಅನ್ನು 1860ರ ಸೊಸೈಟೀಸ್ ನೋಂದಣಿ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಿರುವುದರಿಂದ ಅದು ಸ್ವಾಯತ್ತ ಸಂಸ್ಥೆಯೂ ಆಗಿದೆ ಎನ್ನುವುದನ್ನು ಸಚಿವಾಲಯದ ಗಮನಕ್ಕೆ ತಂದಿದೆ.
‘‘ಹಾಗಾಗಿ, 12.08.2026ರ ಆದೇಶವನ್ನು ದಯವಿಟ್ಟು ತಡೆಹಿಡಿಯುವಂತೆ ಹಾಗೂ ಈ ವಿಷಯವನ್ನು ಹೊಸದಾಗಿ ಪರಿಶೀಲಿಸುವಂತೆ ಸಚಿವಾಲಯವನ್ನು ವಿನಂತಿಸಲು ಫೆಡರೇಶನ್ ಬಯಸುತ್ತದೆ’’ ಎಂದು ಅಹ್ಲಾವತ್ ತಿಳಿಸಿದ್ದಾರೆ.
ಒಲಿಂಪಿಕ್ ಸನ್ನದಿನ ನಿಯಮಗಳು 27 ಮತ್ತು 28ರ ಅಡಿಯಲ್ಲಿ ಬರುವ ಕ್ರೀಡಾ ಸ್ವಾಯತ್ತತೆಯ ತತ್ವಗಳನ್ನು ಉಲ್ಲೇಖಿಸುತ್ತಾ, ಯಾವುದೇ ಬಾಹ್ಯ ಅಥವಾ ಮಧ್ಯಂತರ ಆಡಳಿತ ವ್ಯವಸ್ಥೆಯ ವಿರುದ್ಧ ಅವರು ಎಚ್ಚರಿಸಿದ್ದಾರೆ. ಒಲಿಂಪಿಕ್ ಸನ್ನದು ಮತ್ತು ITTF ನಿಯಮಗಳು ರಾಷ್ಟ್ರೀಯ ಕ್ರೀಡಾ ಫೆಡರೇಶನ್ಗಳ ಸ್ವಾಯತ್ತತೆಯನ್ನು ರಕ್ಷಿಸುತ್ತವೆ ಹಾಗೂ ಅವುಗಳ ಆಡಳಿತವು ಮೂರನೆಯವರ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಎಂದು ಒತ್ತಾಯಿಸುತ್ತವೆ ಎಂದು ಹೇಳಿಕೆ ತಿಳಿಸಿದೆ.
ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿರುವ ಸಮಸ್ಯೆಗಳಿಗೆ ಜೂನ್ 30ರಂದು ಶೋ-ಕಾಸ್ (ಕಾರಣ ಕೇಳಿ) ನೋಟಿಸ್ ನೀಡುವ ಮುಂಚೆಯೇ ಪರಿಹಾರ ಕಂಡುಕೊಳ್ಳಲಾಗಿತ್ತು ಅಥವಾ ಜುಲೈ 7ರಂದು ಸಚಿವಾಲಯಕ್ಕೆ ನೀಡಿದ ವಿವರವಾದ ಉತ್ತರದಲ್ಲಿ ಸ್ಪಷ್ಟಪಡಿಸಲಾಗಿತ್ತು ಎಂದು ಫೆಡರೇಶನ್ ಹೇಳಿಕೊಂಡಿದೆ. TTFIನ ಉತ್ತರದ ಜೊತೆಗೆ ಸಭೆಗಳ ನಡಾವಳಿಗಳು, ನಿರ್ಣಯಗಳು ಮತ್ತು ಪ್ರಮಾಣಿತ ದಾಖಲೆಗಳನ್ನು ಲಗತ್ತಿಸಲಾಗಿತ್ತು ಎಂದು ಅಹ್ಲಾವತ್ ಹೇಳಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ತನ್ನ ಫೆಡರೇಶನ್ನ ಸಾಧನೆಯತ್ತ ಬೆಟ್ಟುಮಾಡಿರುವ ಅಹ್ಲಾವತ್, ಐವರು ಭಾರತೀಯ ಮಹಿಳೆಯರು ಮತ್ತು ಮೂವರು ಭಾರತೀಯ ಪುರುಷರು ಕ್ರಮವಾಗಿ ITTF ವಿಶ್ವದ ಅಗ್ರ-100 ಮತ್ತು ಅಗ್ರ-50ರಲ್ಲಿ ಇದ್ದಾರೆ ಎಂದಿದ್ದಾರೆ. ಅದೂ ಅಲ್ಲದೆ, ಏಶ್ಯನ್ ಗೇಮ್ಸ್ ಮತ್ತು ಏಶ್ಯನ್ ಯೂತ್ ಚಾಂಪಿಯನ್ ಶಿಪ್ ಗಳಲ್ಲಿ ಭಾರತ ಪದಕಗಳನ್ನು ಗೆದ್ದಿದೆ ಎಂದು ಹೇಳಿದ್ದಾರೆ.
ಅಹ್ಲಾವತ್ ಮಾಜಿ TTFI ಮುಖ್ಯಸ್ಥ ದುಶ್ಯಂತ ಚೌಟಾಲರ ಪತ್ನಿಯಾಗಿದ್ದಾರೆ.
‘‘ಫೆಡರೇಶನ್ ಸಚಿವಾಲಯದೊಂದಿಗೆ ನಿಕಟ ಮತ್ತು ರಚನಾತ್ಮಕ ಸಂಪರ್ಕವನ್ನು ಹೊಂದಿದೆ ಹಾಗೂ ತನ್ನ ಗಮನಕ್ಕೆ ತರಲಾಗುವ ಯಾವುದೇ ಕಳವಳಗಳನ್ನು ಪರಿಹರಿಸಲು ಸಂಪೂರ್ಣವಾಗಿ ಬದ್ಧವಾಗಿದೆ’’ ಎಂದು ಅದು ಹೇಳಿದೆ.






