ಗುರುವಾರ ವೆಸ್ಟ್ಇಂಡೀಸ್ ವಿರುದ್ಧ ಟ್ವೆಂಟಿ-20 ಸರಣಿ ಆರಂಭ: ಭಾರತವೇ ಫೇವರಿಟ್

Photo:PTI
ಟ್ರಿನಿಡಾಡ್: ಏಕದಿನ ಸರಣಿಯಲ್ಲಿ ದಿಗ್ವಿಜಯ ಸಾಧಿಸಿದ 48 ಗಂಟೆಯೊಳಗೆ ಟೀಮ್ ಇಂಡಿಯಾವು ಗುರುವಾರ ಆತಿಥೇಯ ವೆಸ್ಟ್ಇಂಡೀಸ್ ವಿರುದ್ಧ 5 ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಭಾರತವು ಮತ್ತೊಮ್ಮೆ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.
ಈ ಸರಣಿಯು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು ಇರುವ ಉತ್ತಮ ವೇದಿಕೆಯಾಗಿದೆ.
ಭಾರತವು 3 ಪಂದ್ಯಗಳ ಏಕದಿನ ಸರಣಿಯಲ್ಲಿ 2ನೇ ಪಂದ್ಯವನ್ನು ಸೋತಿದ್ದರೂ ಕೂಡ 2-1 ಅಂತರದಿಂದ ಜಯ ಸಾಧಿಸಿದ್ದು ಈ ವರ್ಷ 50 ಓವರ್ಗಳ ವಿಶ್ವಕಪ್ ನಡೆಯುತ್ತಿರುವ ಕಾರಣ ಈ ಗೆಲುವು ಮಹತ್ವ ಪಡೆದಿದೆ.
ಭಾರತವು ಈ 5 ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ ಹಾಗೂ ಮುಕೇಶ್ ಕುಮಾರ್ರಂತಹ ಯುವ ಆಟಗಾರರಿಗೆ ಅವಕಾಶ ನೀಡುವತ್ತ ಚಿತ್ತ ಹರಿಸಿದೆ. ಭಾರತವು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಬ್ರಿಯಾನ್ ಲಾರಾ ಸ್ಟೇಡಿಯಮ್ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಐಪಿಎಲ್ನಲ್ಲಿ ನೀಡಿರುವ ಅಮೋಘ ಪ್ರದರ್ಶನದ ಆಧಾರದಲ್ಲಿ ತಿಲಕ್ ವರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಭಾರತದ ಟಿ-20 ತಂಡದಲ್ಲಿ ಮೊದಲ ಬಾರಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಇತ್ತೀಚೆಗಿನ ದಿನಗಳಲ್ಲಿ ವೆಸ್ಟ್ಇಂಡೀಸ್ ತಂಡ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ದಯನೀಯ ವೈಫಲ್ಯ ಕಾಣುತ್ತಿದ್ದು, ಭಾರತ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ಸೋಲಿನಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಸರಣಿಗೆ ಸಜ್ಜಾಗಬೇಕಾಗಿದೆ. ರೊವ್ಮನ್ ಪೊವೆಲ್ ನಾಯಕತ್ವದ ವಿಂಡೀಸ್ ಟಿ-20 ತಂಡಕ್ಕೆ ವಿಕೆಟ್ ಕೀಪರ್-ಬ್ಯಾಟರ್ ಶಾಯ್ ಹೋಪ್ ಹಾಗೂ ವೇಗದ ಬೌಲರ್ ಒಶಾನ್ ಥಾಮಸ್ ವಾಪಸಾಗಿದ್ದಾರೆ.
ರವಿ ಬಿಷ್ಣೋಯ್ ಅವರು ಸ್ಪಿನ್ನರ್ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲದೀಪ್ ಯಾದವ್ ರೊಂದಿಗೆ ತಂಡಕ್ಕೆ ವಾಪಸಾಗಲಿದ್ದಾರೆ. ಅಕ್ಷರ್ ಪಟೇಲ್ ಕೂಡ ಸ್ಪಿನ್ನರ್ಗೆ ಸಾಥ್ ನೀಡಲಿದ್ದಾರೆ.
ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ಖಾನ್ ಹಾಗೂ ಹೊಸ ಮುಖ ಮುಕೇಶ್ಕುಮಾರ್ ವೇಗದ ಬೌಲಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಮುಂದಿನ ವರ್ಷ ಟಿ-20 ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಎಲ್ಲ ಆಟಗಾರರಿಗೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಈ ಪಂದ್ಯವು ಮುಖ್ಯವಾಗಿದೆ.
ಫ್ಲೋರಿಡಾದಲ್ಲಿ ಆಗಸ್ಟ್ 12 ಹಾಗೂ 13ರಂದು ಅಂತಿಮ 2 ಪಂದ್ಯಗಳು ನಡೆಯುವ ಮೂಲಕ ಟಿ-20 ಸರಣಿ ಮುಕ್ತಾಯವಾಗಲಿದೆ.
ಪಂದ್ಯದ ಸಮಯ: ರಾತ್ರಿ 8:00(ಭಾರತದ ಕಾಲಮಾನ)
ತಂಡಗಳು
ಭಾರತ: ಇಶಾನ್ ಕಿಶನ್(ವಿಕೆಟ್ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ,ಸೂರ್ಯಕುಮಾರ್ ಯಾದವ್(ಉಪ ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ಕೀಪರ್), ಹಾರ್ದಿಕ್ ಪಾಂಡ್ಯ(ನಾಯಕ), ಅಕ್ಷರ್ ಪಟೇಲ್, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಕೇಶ್ ಕುಮಾರ್.
ವೆಸ್ಟ್ಇಂಡೀಸ್: ರೊವ್ಮನ್ ಪೊವೆಲ್(ನಾಯಕ),ಕೈಲ್ ಮೇಯಸ್(ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರೊನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹುಸೇನ್, ಅಲ್ಝಾರಿ ಜೋಸೆಫ್, ಬ್ರೆಂಡನ್ ಕಿಂಗ್, ಒಬೆಡ್ ಮೆಕ್ಕಾಯ್, ನಿಕೊಲಸ್ ಪೂರನ್, ರೋಮಾರಿಯೊ ಶೆಫರ್ಡ್, ಒಡಿಯನ್ ಸ್ಮಿತ್,ಒಶಾನ್ ಥಾಮಸ್.