ಟ್ವೆಂಟಿ-20 ಕ್ರಿಕೆಟ್ | 650 ವಿಕೆಟ್ಗಳನ್ನು ಪಡೆದ ಎರಡನೇ ಬೌಲರ್ ಸುನೀಲ್ ನರೇನ್

ಸುನೀಲ್ ನರೇನ್ |Photo Credit : X
ಜಮೈಕಾ: ವೆಸ್ಟ್ಇಂಡೀಸ್ ಸ್ಪಿನ್ನರ್ ಸುನೀಲ್ ನರೇನ್ ತಮ್ಮ ಅಸಾಧಾರಣ ಟಿ-20 ವೃತ್ತಿಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಚುಟುಕು ಮಾದರಿ ಕ್ರಿಕೆಟ್ ಇತಿಹಾಸದಲ್ಲಿ 650 ವಿಕೆಟ್ಗಳನ್ನು ಪಡೆದ ಎರಡನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಟರೌಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧದ 2026ರ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರಿನಿಬಾಗೊ ನೈಟ್ ರೈಡರ್ಸ್ ಸ್ಪಿನ್ನರ್ ನರೇನ್ ಈ ಸಾಧನೆ ಮಾಡಿದರು.
611ನೇ ಟಿ-20 ಪಂದ್ಯವನ್ನಾಡಿದ ನರೇನ್ಗೆ ವಿಶೇಷ ಕ್ಲಬ್ಗೆ ಸೇರಲು ಕೇವಲ ಒಂದು ವಿಕೆಟ್ ಅಗತ್ಯವಿತ್ತು. ತನ್ನ ನಾಲ್ಕು ಓವರ್ಗಳಲಿ 27 ರನ್ಗೆ 1 ವಿಕೆಟನ್ನು ಪಡೆದಿದ್ದಾರೆ.
ಲುಸಿಯಾ ಕಿಂಗ್ಸ್ ಇನಿಂಗ್ಸ್ನ 12ನೇ ಓವರ್ನ ಆರನೇ ಎಸೆತದಲ್ಲಿ ನರೇನ್ ತನ್ನ 650ನೇ ವಿಕೆಟನ್ನು ಪಡೆದರು.
ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಮಾತ್ರ ಈ ಹಿಂದೆ ಈ ಸಾಧನೆ ಮಾಡಿದ್ದರು. ರಶೀದ್ 547 ಟಿ-20 ಪಂದ್ಯಗಳಲ್ಲಿ 736 ವಿಕೆಟ್ಗಳನ್ನು ಪಡೆದಿದ್ದಾರೆ.
ಡ್ವೆಯ್ನ್ ಬ್ರಾವೊ(631 ವಿಕೆಟ್ಗಳು)ಹಾಗೂ ಇಮ್ರಾನ್ ತಾಹಿರ್(582)ಪಟ್ಟಿಯಲ್ಲಿ ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ ಟೂರ್ನಿಯಲ್ಲೂ ನರೇನ್ ಉತ್ತಮ ಪ್ರದರ್ಶನ ನೀಡಿದ್ದಾರೆ. 2012ರಲ್ಲಿ ಕೆಕೆಆರ್ ಪರ ತನ್ನ ಚೊಚ್ಚಲ ಪಂದ್ಯವನ್ನಾಡಿದ ನಂತರ ನರೇನ್ ಅವರು 202 ಪಂದ್ಯಗಳಲ್ಲಿ 207 ವಿಕೆಟ್ಗಳನ್ನು ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 200ಕ್ಕೂ ಅಧಿಕ ವಿಕೆಟ್ ಪಡೆದ ವಿದೇಶದ ಮೊದಲ ಆಟಗಾರನಾಗಿದ್ದಾರೆ.






