ಪುರುಷರ ಅಂಡರ್-19 ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ ಪ್ರಕಟ

ಹೊಸದಿಲ್ಲಿ, ನ.19: ಮುಂದಿನ ವರ್ಷ ಜನವರಿ 15ರಿಂದ ಫೆಬ್ರವರಿ 6ರ ತನಕ ನಡೆಯಲಿರುವ 16ನೇ ಆವೃತ್ತಿಯ ಪುರುಷರ ಅಂಡರ್-19 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಬುಧವಾರ ಪ್ರಕಟಿಸಿದೆ. ಭಾರತ ಕ್ರಿಕೆಟ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ಕ್ರಿಕೆಟ್ ತಂಡವನ್ನು ಎದುರಿಸಲಿದೆ.
ಝಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ 23 ದಿನಗಳ ಕಾಲ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು, 41 ಪಂದ್ಯಗಳನ್ನು ಆಡಲಿವೆ.
ಸ್ಪರ್ಧಾವಳಿಯಲ್ಲಿ ತಾಂಜಾನಿಯಾ ಕ್ರಿಕೆಟ್ ತಂಡ ಪಾದಾರ್ಪಣೆಗೈಯಲಿದೆ. 2020ರ ನಂತರ ಜಪಾನ್ ತಂಡವು ಎರಡನೇ ಬಾರಿ ವಿಶ್ವಕಪ್ನಲ್ಲಿ ಭಾಗವಹಿಸಲಿದೆ.
16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತೀ ಗುಂಪಿನಲ್ಲಿ ನಾಲ್ಕು ತಂಡಗಳಿರುತ್ತವೆ. ‘ಎ’ ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಅಮೆರಿಕ ಹಾಗೂ ನ್ಯೂಝಿಲ್ಯಾಂಡ್ ತಂಡಗಳಿವೆ. ‘ಬಿ’ ಗುಂಪಿನಲ್ಲಿ ಝಿಂಬಾಬ್ವೆ, ಪಾಕಿಸ್ತಾನ,ಇಂಗ್ಲೆಂಡ್ ಹಾಗೂ ಸ್ಕಾಟ್ಲ್ಯಾಂಡ್ ತಂಡಗಳಿವೆ. ‘ಸಿ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ, ಐರ್ಲ್ಯಾಂಡ್, ಜಪಾನ್ ಹಾಗೂ ಶ್ರೀಲಂಕಾ ತಂಡಗಳಿವೆ. ‘ಡಿ’ ಗುಂಪಿನಲ್ಲಿ ತಾಂಜಾನಿಯ, ವೆಸ್ಟ್ಇಂಡೀಸ್, ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.
ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿಲ್ಲ. ಆದರೆ ಉಭಯ ತಂಡಗಳು ಪಂದ್ಯಾವಳಿಯ ನಾಕೌಟ್ ಹಂತದಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಭಾರತ ತಂಡವು ಜನವರಿ 15ರಂದು ಅಮೆರಿಕ, ಜನವರಿ 17ರಂದು ಬಾಂಗ್ಲಾದೇಶ ಹಾಗೂ ಜನವರಿ 24ರಂದು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಎಲ್ಲ ಮೂರು ಪಂದ್ಯಗಳು ಬುಲಾವಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಲಿದೆ.
ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಪ್ರತೀ ತಂಡಗಳು ಇತರ ಮೂರು ತಂಡಗಳ ವಿರುದ್ಧ ಆಡಲಿದೆ. ಪ್ರತೀ ಗುಂಪಿನ ಅಗ್ರ ಮೂರು ರ್ಯಾಂಕಿನ ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಆ ನಂತರ ಅಗ್ರ ನಾಲ್ಕು ತಂಡಗಳು ಕ್ರಮವಾಗಿ ಫೆಬ್ರವರಿ 3 ಹಾಗೂ 4ರಂದು ಬುಲಾವಯೊ ಹಾಗೂ ಹರಾರೆಯಲ್ಲಿ ನಡೆಯಲಿರುವ ಸೆಮಿ ಫೈನಲ್ಗೆ ಅರ್ಹತೆ ಪಡೆಯಲಿವೆ. ಫೈನಲ್ ಪಂದ್ಯವು ಫೆ.6ರಂದು ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಲಿದೆ.
ಎರಡು ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರುತ್ತವೆ ಎಂದು ಐಸಿಸಿ ತಿಳಿಸಿದೆ. ಎಲ್ಲ ತಂಡಗಳು ಜನವರಿ 8ಕ್ಕೆ ಆಗಮಿಸಲಿದ್ದು ಟೂರ್ನಿ ಆರಂಭಕ್ಕಿಂತ ಮೊದಲು ಜನವರಿ 9ರಿಂದ 14ರ ತನಕ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
2024ರಲ್ಲಿ ನಡೆದ ಹಿಂದಿನ ಆವೃತ್ತಿಯ ಅಂಡರ್-19 ವಿಶ್ವಕಪ್ನ ಫೈನಲ್ನಲ್ಲಿ ಭಾರತ ತಂಡವನ್ನು ಮಣಿಸಿದ್ದ ಆಸ್ಟ್ರೇಲಿಯ ತಂಡವು ಪ್ರಶಸ್ತಿಯನ್ನು ಜಯಿಸಿತ್ತು.
► ಭಾರತ ಆಡಲಿರುವ ಪಂದ್ಯಗಳ ವೇಳಾಪಟ್ಟಿ
ಜನವರಿ 15: ಅಮೆರಿಕ-ಭಾರತ, ಕ್ವೀನ್ಸ್ ಸ್ಪೋಟ್ಸ್ ಕ್ಲಬ್, ಬುಲಾವಯೊ
ಜನವರಿ 17: ಭಾರತ-ಬಾಂಗ್ಲಾದೇಶ, ಕ್ವೀನ್ಸ್ ಸ್ಪೋಟ್ಸ್ ಕ್ಲಬ್, ಬುಲಾವಯೊ
ಜನವರಿ 24: ಭಾರತ-ನ್ಯೂಝಿಲ್ಯಾಂಡ್, ಕ್ವೀನ್ಸ್ ಸ್ಪೋಟ್ಸ್ ಕ್ಲಬ್, ಬುಲಾವಯೊ







