ಕಿರಿಯರ ವಿಶ್ವಕಪ್ | ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ

PC | ndtv
ಹೊಸದಿಲ್ಲಿ: ವಿಹಾನ್ ಮಲ್ಹೋತ್ರಾ ಅವರ ಮಾರಕ ದಾಳಿಯಿಂದ ಕಂಗೆಟ್ಟ ಬಾಂಗ್ಲಾದೇಶದ 19ರ ವಯೋಮಿತಿಯ ತಂಡ ಕಿರಿಯರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಡಿಎಲ್ಎಸ್ ನಿಯಮಾವಳಿಯಡಿ 18 ರನ್ಗಳ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡ 238 ರನ್ ಕಲೆಹಾಕಿತು. ವೈಭವ್ ಸೂರ್ಯವಂಶಿ 67 ಎಸೆತಗಳಲ್ಲಿ 72 ರನ್ ಗಳಿಸಿದರೆ, 17 ವರ್ಷದ ವಿಕೆಟ್ಕೀಪರ್-ಬ್ಯಾಟ್ಸ್ ಮನ್ ಅಭಿಜ್ಞಾನ್ ಅಭಿಷೇಕ್ ತಾಳ್ಮೆಯ 80 ರನ್ ಗಳಿಸಿ ಭಾರತದ ಗೌರವಾರ್ಹ ಮೊತ್ತಕ್ಕೆ ಕಾರಣರಾದರು.
ಕಿರಿಯರ ವಿಶ್ವಕಪ್ ಇತಿಹಾಸದಲ್ಲೇ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾದರು. ಅಂತೆಯೇ ಯುವ ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ವಿರಾಟ್ಕೊಹ್ಲಿಯವರ ದಾಖಲೆಯನ್ನೂ ಸೂರ್ಯವಂಶಿ ಮುರಿದರು. ಬಾಂಗ್ಲಾದೇಶದ ಪರವಾಗಿ ವೇಗದ ಬೌಲರ್ ಅಲ್ ಫಹಾದ್ ಐದು ವಿಕೆಟ್ಗಳನ್ನು ಕಿತ್ತರು.
ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಬಾಂಗ್ಲಾ ತಂಡ ಭಾರತದ ಬೌಲರ್ಗಳ ದಾಳಿಗೆ ಕಂಗೆಟ್ಟು 146 ರನ್ಗಳಿಗೆ ಆಲೌಟ್ ಆಯಿತು. ಗೆಲ್ಲಲು ಬಾಂಗ್ಲಾ ತಂಡ 29 ಓವರ್ಗಳಲ್ಲಿ 165 ರನ್ ಗಳಿಸಬೇಕಿತ್ತು. ಟೂರ್ನಿಯಲ್ಲಿ ಭಾರತ ಯುವ ತಂಡಕ್ಕೆ ಇದು ಸತತ ಎರಡನೇ ಜಯವಾಗಿದೆ.







