U19 ವಿಶ್ವಕಪ್ ನಲ್ಲಿ ಮಿಂಚಲು ನವಿ ಮುಂಬೈ ಆಟಗಾರ ಅಭಿಜ್ಞಾನ್ ಸಜ್ಜು

ಅಭಿಜ್ಞಾನ್ | Photo Credit : x
ಮುಂಬೈ, ಡಿ.30: ಮುಂಬೈ ಸೀನಿಯರ್ ಕ್ರಿಕೆಟ್ ತಂಡದಲ್ಲಿ ಇನ್ನಷ್ಟೇ ಆಡಬೇಕಾಗಿರುವ 17ರ ವಯಸ್ಸಿನ ನವಿ ಮುಂಬೈ ಆಟಗಾರ ಅಭಿಜ್ಞಾನ್ ಕುಂಡು ಭಾರತದ ಅಂಡರ್-19 ತಂಡದಲ್ಲಿ ಮಿಂಚುತ್ತಿದ್ದಾರೆ. ಮುಂದಿನ ವರ್ಷ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತದ ಅಂಡರ್-19 ತಂಡದ ಉಪ ನಾಯಕನಾಗಿ ಮೇನಲ್ಲಿ ನೇಮಕಗೊಂಡಿದ್ದ ವಿಕೆಟ್ ಕೀಪರ್-ಬ್ಯಾಟರ್ ಅಭಿಜ್ಞಾನ್ 34 ಎಸೆತಗಳಲ್ಲಿ ಔಟಾಗದೆ 45 ರನ್ ಗಳಿಸಿ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಆರು ವಿಕೆಟ್ಗಳಿಂದ ಮಣಿಸುವಲ್ಲಿ ನೆರವಾಗಿದ್ದರು.ಆ ನಂತರ ಇಂಗ್ಲೆಂಡ್ ವಿರುದ್ಧದ ಮೊದಲ ಯೂತ್ ಟೆಸ್ಟ್ ಪಂದ್ಯದಲ್ಲಿ 95 ಎಸೆತಗಳಲ್ಲಿ 90 ರನ್ ಗಳಿಸಿದ್ದರು. ಎರಡನೇ ಟೆಸ್ಟ್ನಲ್ಲಿ ಕೇವಲ 46 ಎಸೆತಗಳಲ್ಲಿ 65 ರನ್ ಗಳಿಸಿ ಭಾರತ ತಂಡ ಡ್ರಾ ಸಾಧಿಸುವಲ್ಲಿ ನೆರವಾಗಿದ್ದರು.
ಸೆಪ್ಟಂಬರ್ನಲ್ಲಿ ಬ್ರಿಸ್ಬೇನ್ನಲ್ಲಿ ನಡೆದಿದ್ದ ಯೂತ್ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಭಾರತ 3-0 ಅಂತರದಿಂದ ಜಯಶಾಲಿಯಾಗಲು ನೆರವಾಗಿದ್ದರು. 2 ಪಂದ್ಯಗಳಲ್ಲಿ 158ರ ಸರಾಸರಿಯಲ್ಲಿ 158 ರನ್ ಗಳಿಸಿದ್ದರು. ಲಕ್ನೊದಲ್ಲಿ ನಡೆದಿದ್ದ ಅಂಡರ್-19 ಚಾಲೆಂಜರ್ಸ್ ಟ್ರೋಫಿಯಲ್ಲಿ ಅವಳಿ ಶತಕಗಳನ್ನು ಗಳಿಸಿದ್ದ ಅಭಿಜ್ಞಾನ್ ‘ಸರಣಿಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು. ಇತ್ತೀಚೆಗೆ ದುಬೈನಲ್ಲಿ ನಡೆದಿದ್ದ ಅಂಡರ್-19 ಏಶ್ಯಕಪ್ನಲ್ಲಿ ಮಲೇಶ್ಯ ತಂಡದ ವಿರುದ್ಧ ದಾಖಲೆಯ ದ್ವಿಶತಕ(ಔಟಾಗದೆ 209 , 125 ಎಸೆತ, 9 ಸಿಕ್ಸರ್, 17 ಬೌಂಡರಿ)ಗಳಿಸಿದ್ದ ಅಭಿಜ್ಞಾನ್ ಕುಂಡು ಯೂತ್ ಏಕದಿನದಲ್ಲಿ ದ್ವಿಶತಕ ಗಳಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದರು.
ಅಭಿಜ್ಞಾನ್ ಕುಂಡು 2026ರಲ್ಲಿ ಝಿಂಬಾಬ್ವೆ ಹಾಗೂ ನಮೀಬಿಯಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡ ನಂತರ ಭಾರತ ತಂಡವು ಜನವರಿ 15ರಂದು ಹರಾರೆಯಲ್ಲಿ ಅಮೆರಿಕದ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.







