2026ರ ಟಿ20 ವಿಶ್ವಕಪ್ ಗೆ ಕೊನೆಯ ತಂಡವಾಗಿ ಯುಎಇ ಸೇರ್ಪಡೆ

Photo Credit : ICC
ದುಬೈ, ಅ. 16: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) 20ನೇ ಹಾಗೂ ಅಂತಿಮ ತಂಡವಾಗಿ 2026ರ ಆವೃತ್ತಿಯ ಟಿ20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿದೆ. ಪಂದ್ಯಾವಳಿಯು ಭಾರತ ಮತ್ತು ಶ್ರೀಲಂಕಾದಲ್ಲಿ ಫೆಬ್ರವರಿ 6ರಿಂದ ಮಾರ್ಚ್ 8ರವರೆಗೆ ನಡೆಯಲಿದೆ.
ಟಿ20 ವಿಶ್ವಕಪ್ ಏಶ್ಯಾ-ಇಎಪಿ ಕ್ಯಾಲಿಫೈಯರ್ 2025 ಪಂದ್ಯಾವಳಿಯ ಸೂಪರ್ ಸಿಕ್ಸ್ ಹಂತದಲ್ಲಿ ಗುರುವಾರ ಜಪಾನ್ ತಂಡವನ್ನು ಸೋಲಿಸಿದ ಬಳಿಕ ಯುಎಇ ವಿಶ್ವಕಪ್ ಗೆ ಅರ್ಹತೆ ಪಡೆಯಿತು.
ಇದೇ ಪಂದ್ಯಾವಳಿಯಿಂದ ನೇಪಾಳ ಮತ್ತು ಒಮಾನ್ ಈಗಾಗಲೇ ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದಿವೆ. ಲಭ್ಯವಿರುವ ಏಕೈಕ ಸ್ಥಾನಕ್ಕಾಗಿ ಯುಎಇ ಹೋರಾಟ ಮಾಡಬೇಕಾಗಿತ್ತು.
ಮೊದಲ ಸೂಪರ್ ಸಿಕ್ಸ್ ಪಂದ್ಯಗಳಲ್ಲಿ ನೇಪಾಳ ಮತ್ತು ಒಮಾನ್ ವಿರುದ್ಧ ಸೋಲುಗಳನ್ನು ಅನುಭವಿಸಿದ ಬಳಿಕ, ಯುಎಇಗೆ ಜಪಾನ್ ವಿರುದ್ಧದ ಪಂದ್ಯವು ಮಹತ್ವದ್ದಾಗಿತ್ತು. ಅದು ಫೈನಲ್ಗೆ ತೇರ್ಗಡೆ ಹೊಂದಬೇಕಾದರೆ ಸಮೋವ ಮತ್ತು ಜಪಾನ್ ವಿರುದ್ಧದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.
ಜಪಾನ್ 20 ಓವರ್ ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 116 ರನ್ ಗಳಿಸಿತು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವಟರು ಮಿಯವುಚಿ 35 ಎಸೆತಗಳಲ್ಲಿ 42 ರನ್ಗಳನ್ನು ಸಿಡಿಸಿದರು. ಯುಎಇಯ ಹೈದರ್ ಅಲಿ 20 ರನ್ ಗಳನ್ನು ಕೊಟ್ಟು 3 ವಿಕೆಟ್ ಗಳನ್ನು ಉರುಳಿಸಿದರು.
ಗೆಲ್ಲಲು 117 ರನ್ಗಳ ಗುರಿಯನ್ನು ಪಡೆದ ಯುಎಇ, ನಾಯಕ ಮುಹಮ್ಮದ್ ವಸೀಮ್ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 7.5 ಓವರ್ಗಳಲ್ಲಿ ಗುರಿ ತಲುಪಿತು. ವಸೀಮ್ 26 ಎಸೆತಗಳಲ್ಲಿ 42 ರನ್ಗಳನ್ನು ಸಿಡಿಸಿದರು. ಇನ್ನೋರ್ವ ಆರಂಭಿಕ ಬ್ಯಾಟರ್ ಅಲಿಶಾನ್ ಶರಫು 46 ರನ್ಗಳ ಕೊಡುಗೆ ನೀಡಿದರು.







