ಏಶ್ಯಕಪ್ ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ; ಸ್ಪಷ್ಟನೆ ನೀಡಿದ ಯುಎಇ ಕ್ರಿಕೆಟ್ ಮಂಡಳಿ

ಏಶ್ಯಕಪ್ | PC : X
ದುಬೈ, ಆ.8: ಇತ್ತೀಚೆಗಿನ ಉದ್ವಿಗ್ನ ಪರಿಸ್ಥಿತಿಯ ಹೊರತಾಗಿಯೂ ಮುಂಬರುವ 2025ರ ಆವೃತ್ತಿಯ ಏಶ್ಯಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಯಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ನ ಸಿಒಒ ಸುಭಾನ್ ಅಹ್ಮದ್ ಭರವಸೆ ನೀಡಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ನಂತರ ಇಂಡಿಯಾ ಚಾಂಪಿಯನ್ಸ್ ತಂಡವು ಪಾಕಿಸ್ತಾನ ಚಾಂಪಿಯನ್ಸ್ ತಂಡದ ವಿರುದ್ಧ ಲೆಜೆಂಡ್ ಗಳ ವಿಶ್ವ ಚಾಂಪಿಯನ್ ಶಿಪ್(ಡಬ್ಲ್ಯುಸಿಎಲ್)ಟೂರ್ನಿಯಲ್ಲಿ 2 ಪಂದ್ಯಗಳಲ್ಲಿ ಆಡಲು ನಿರಾಕರಿಸಿದ ನಂತರ ಈ ಸ್ಪಷ್ಟನೆ ನೀಡಲಾಗಿದೆ.
‘‘ನನಗೆ ಅಧಿಕೃತವಾಗಿ ಗ್ಯಾರಂಟಿ ನೀಡಲು ಸಾಧ್ಯವಾಗದಿದ್ದರೂ ಪಾಕಿಸ್ತಾನ ಹಾಗೂ ಭಾರತ ತಂಡಗಳು ಆಡುವುದಕ್ಕೆ ಯಾವುದೇ ಅಪಾಯವಿಲ್ಲ. ಏಶ್ಯಕಪ್ ಟೂರ್ನಿಯನ್ನು ಲೆಜೆಂಡ್ ಗಳ ವಿಶ್ವ ಚಾಂಪಿಯನ್ ಶಿಪ್ ನಂತಹ ಖಾಸಗಿ ಪಂದ್ಯಾವಳಿಗೆ ಹೋಲಿಸಲಾಗುವುದಿಲ್ಲ. ಆ ಟೂರ್ನಿಯಲ್ಲಿ ಭಾರತ ಚಾಂಪಿಯನ್ಸ್ ತಂಡವು ಪಾಕಿಸ್ತಾನ ಚಾಂಪಿಯನ್ಸ್ ತಂಡದ ವಿರುದ್ಧ ಲೀಗ್ ಹಂತ ಹಾಗೂ ಸೆಮಿ ಫೈನಲ್ ಎರಡೂ ಪಂದ್ಯವನ್ನು ಆಡಲು ನಿರಾಕರಿಸಿತ್ತು’’ ಎಂದು ಅಹ್ಮದ್ ಸುದ್ದಿಗಾರರಿಗೆ ತಿಳಿಸಿದರು.
2025ರ ಆವೃತ್ತಿಯ ಪುರುಷರ ಟಿ-20 ಏಶ್ಯಕಪ್ ಟೂರ್ನಿಯು ಸೆಪ್ಟಂಬರ್ 9ರಿಂದ 28ರ ತನಕ ನಡೆಯಲಿದ್ದು, ದುಬೈ ಹಾಗೂ ಅಬುಧಾಬಿ ನಗರಗಳು ಟೂರ್ನಿಯ ಆತಿಥ್ಯವಹಿಸಲಿವೆ. ಪಂದ್ಯಾವಳಿಯ ಫೈನಲ್ ಸಹಿತ 11 ಪಂದ್ಯಗಳಿಗೆ ದುಬೈ ಆತಿಥ್ಯವಹಿಸಿದರೆ, ಅಬುಧಾಬಿ 8 ಪಂದ್ಯಗಳಿಗೆ ಆತಿಥ್ಯವಹಿಸಲಿದೆ.
ಭಾರತ ಕ್ರಿಕೆಟ್ ತಂಡವು ಕ್ರಮವಾಗಿ ಸೆಪ್ಟಂಬರ್ 10 ಹಾಗೂ 14ರಂದು ದುಬೈ ಇಂಟರ್ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಯುಎಇ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಆಡಲಿದೆ. ಸೆಪ್ಟಂಬರ್ 19ರಂದು ಅಬುಧಾಬಿಯ ಶೇಕ್ ಝಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಮಾನ್ ತಂಡವನ್ನು ಎದುರಿಸಲಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಈ ಎರಡು ತಂಡಗಳು ಸೂಪರ್-4 ಹಾಗೂ ಫೈನಲ್ ಪಂದ್ಯದಲ್ಲೂ ಸೆಣಸಾಡಬಹುದು.
ಎಪ್ರಿಲ್ ನಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದ ನಂತರ ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧ ಹದಗೆಟ್ಟಿರುವ ಸಮಯದಲ್ಲೇ ಏಶ್ಯಕಪ್ ನಡೆಯುತ್ತಿದೆ.







