FIFA ಖಾಸಗಿ ಹೂಡಿಕೆ ಯೋಜನೆಗೆ UEFA ತೀವ್ರ ವಿರೋಧ; ವಿಶ್ವಕಪ್ ಬಹಿಷ್ಕಾರದ ಬಗ್ಗೆ ತುರ್ತು ಸಭೆ

ಡೊನಾಲ್ಡ್ ಟ್ರಂಪ್ | Photo Credit : AP
ಹೊಸದಿಲ್ಲಿ: ಫಿಫಾದ ವಾಣಿಜ್ಯ ಚಟುವಟಿಕೆಗಳಲ್ಲಿ ಖಾಸಗಿ ಹೂಡಿಕೆದಾರರಿಗೆ ಈಕ್ವಿಟಿ ಪಾಲು ಮಾರಾಟ ಮಾಡುವ ಯೋಜನೆಗೆ UEFA (ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ಸ್) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅಗತ್ಯವಿದ್ದರೆ ವಿಶ್ವಕಪ್ ಬಹಿಷ್ಕಾರ ಸೇರಿದಂತೆ ವಿವಿಧ ಕ್ರಮಗಳ ಬಗ್ಗೆ ಚರ್ಚಿಸಲು ತನ್ನ 55 ಸದಸ್ಯ ರಾಷ್ಟ್ರಗಳ ಫುಟ್ಬಾಲ್ ಸಂಘಗಳ ತುರ್ತು ಸಭೆ ನಡೆಸುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ESPN ವರದಿ ಮಾಡಿದೆ.
ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ, ಫಿಫಾದ ವಾಣಿಜ್ಯ ಸಾಮರ್ಥ್ಯ ಮತ್ತು ಅವಕಾಶಗಳನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಹೊರಗಿನ ಹೂಡಿಕೆದಾರರಿಂದ 20 ಶತಕೋಟಿ ಡಾಲರ್ ಬಂಡವಾಳ ಸಂಗ್ರಹಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಯೋಜನೆಯಡಿ ಹೊಸದಾಗಿ ಸ್ಥಾಪಿಸಲಾಗಿರುವ ಫಿಫಾ ಫಾರ್ವರ್ಡ್ ಎಂಟರ್ಪ್ರೈಸ್ (FFE) ಸಂಸ್ಥೆಗೆ ಹಣಕಾಸು ಒದಗಿಸಲು ಹೂಡಿಕೆದಾರರನ್ನು ಆಹ್ವಾನಿಸಲಾಗುತ್ತದೆ. ಭವಿಷ್ಯದ ಪುರುಷರ ಮತ್ತು ಮಹಿಳೆಯರ ವಿಶ್ವಕಪ್ ಸೇರಿದಂತೆ ಫಿಫಾದ ವಾಣಿಜ್ಯ ಹಾಗೂ ಈವೆಂಟ್ ಕಾರ್ಯಾಚರಣೆಗಳ ಜವಾಬ್ದಾರಿಯನ್ನು ಈ ಸಂಸ್ಥೆ ನಿರ್ವಹಿಸಲಿದೆ.
ಫಿಫಾದ ಯೋಜನೆಗಳಿಗೆ UEFA ಮಂಗಳವಾರವೇ ತ್ವರಿತ ಪ್ರತಿಕ್ರಿಯೆ ನೀಡಿದ್ದು, "ಫುಟ್ಬಾಲ್ ಮಾರಾಟ ಮಾಡಲು ಫಿಫಾದ ಸ್ವತ್ತಲ್ಲ" ಎಂದು ಸ್ಪಷ್ಟಪಡಿಸಿದೆ.
ಯುಕೆ ಪ್ರಧಾನಿ ಆಂಡಿ ಬರ್ನ್ಹ್ಯಾಮ್ ಕೂಡ ಫಿಫಾ ಪ್ರಸ್ತಾಪವನ್ನು ಬಹಿರಂಗವಾಗಿ ಖಂಡಿಸಿದ್ದು, "ಫುಟ್ಬಾಲ್ ಹೂಡಿಕೆದಾರರಿಗೆ ಸೇರಿಲ್ಲ" ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಫಿಫಾದ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಮೊದಲ ಪ್ರಮುಖ ವಿಶ್ವ ನಾಯಕರಾಗಿದ್ದಾರೆ.
ಮೂಲಗಳ ಪ್ರಕಾರ, ಫಿಫಾದ ಪ್ರಸ್ತಾಪಕ್ಕೆ UEFA ಸದಸ್ಯರೊಳಗೆ ವ್ಯಾಪಕ ಮತ್ತು ಬಲವಾದ ವಿರೋಧ ವ್ಯಕ್ತವಾಗಿದೆ.
UEFA ತನ್ನ ಹೇಳಿಕೆಯಲ್ಲಿ, "ಇದು ಫುಟ್ಬಾಲ್ ಆಡಳಿತ ಸಂಸ್ಥೆಗಳು ಎಂದಿಗೂ ದಾಟಬಾರದ ಗೆರೆಯನ್ನು ದಾಟಿದ ನಿರ್ಧಾರವಾಗಿದೆ. UEFA ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪ್ರತಿಯೊಂದು ರಾಷ್ಟ್ರೀಯ ಫುಟ್ಬಾಲ್ ಸಂಘವೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಲೀಗ್ಗಳು, ಕ್ಲಬ್ಗಳು, ಆಟಗಾರರು, ಬೆಂಬಲಿಗರು, ಸರ್ಕಾರಗಳು ಹಾಗೂ ಆಟದ ಭವಿಷ್ಯದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಇದಕ್ಕೆ ಸ್ಪಂದಿಸಬೇಕು" ಎಂದು ತಿಳಿಸಿದೆ.
"ಫುಟ್ಬಾಲ್ನ ಆತ್ಮ ಮತ್ತು ಆಡಳಿತವು ವ್ಯಾಪಾರ ಮಾಡುವ ಆಸ್ತಿಯಲ್ಲ. ಅದರಲ್ಲೂ ಆರ್ಥಿಕ ಲಾಭ ಯಾರಿಗೆ ಆಗಲಿದೆ ಎಂಬುದರ ಬಗ್ಗೆ ಯಾವುದೇ ಪಾರದರ್ಶಕತೆ ಇಲ್ಲ. ನಮ್ಮಲ್ಲಿ ಯಾರೂ ಫುಟ್ಬಾಲ್ ನ ಮಾಲಕರಲ್ಲ. ಅದನ್ನು ಮಾರಾಟ ಮಾಡುವ ಅಧಿಕಾರ ಫಿಫಾಗೆ ಇಲ್ಲ" ಎಂದು ಹೇಳಿಕೆಯಲ್ಲಿ ಒತ್ತಿ ಹೇಳಲಾಗಿದೆ.
ತುರ್ತು ಸಭೆ ಸಾಧ್ಯತೆ
ಇನ್ಫಾಂಟಿನೊ ಅವರ ಯೋಜನೆಗೆ ವಿರುದ್ಧವಾಗಿ ಒಗ್ಗಟ್ಟಿನ ನಿಲುವು ರೂಪಿಸುವ ಉದ್ದೇಶದಿಂದ ಈ ವಾರವೇ 55 ಸದಸ್ಯ ರಾಷ್ಟ್ರಗಳ ಸಂಘಗಳ ಸಭೆ ನಡೆಸಲು UEFA ಯೋಜಿಸಿದೆ. ವಾರಾಂತ್ಯದೊಳಗೆ ಈ ವರ್ಚುವಲ್ ಸಭೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
2021ರಲ್ಲಿ ವಿಶ್ವಕಪ್ ಅನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸುವ ಫಿಫಾದ ಪ್ರಸ್ತಾಪವನ್ನು UEFA ಬಹಿಷ್ಕಾರದ ಎಚ್ಚರಿಕೆ ನೀಡಿದ ಬಳಿಕ ಕೈಬಿಡಲಾಗಿತ್ತು. ಫಿಫಾದ ಈ ಹೊಸ ಯೋಜನೆಗೆ ವಿರೋಧ ವ್ಯಕ್ತಪಡಿಸಲೂ ಇದೇ ರೀತಿಯ ಒತ್ತಡದ ತಂತ್ರವನ್ನು ಬಳಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
4.2 ಶತಕೋಟಿ ಡಾಲರ್ ಬಂಡವಾಳ ಸಂಗ್ರಹ ಗುರಿ
ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 20 ಶತಕೋಟಿ ಡಾಲರ್ ಆರಂಭಿಕ ಷೇರು ಮೌಲ್ಯಮಾಪನದ ಆಧಾರದ ಮೇಲೆ, ನಿಯಂತ್ರಣ ಹಕ್ಕು ನೀಡದ ಅಲ್ಪ ಪಾಲುದಾರಿಕೆಯನ್ನು ಖರೀದಿಸುವ ದೀರ್ಘಾವಧಿಯ ಹೂಡಿಕೆದಾರರನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವ ಮೂಲಕ FFE ಈ ವರ್ಷದ ಅಂತ್ಯದೊಳಗೆ 4.2 ಶತಕೋಟಿ ಡಾಲರ್ವರೆಗೆ ಬಂಡವಾಳ ಸಂಗ್ರಹಿಸಲಿದೆ ಎಂದು ಫಿಫಾ ತಿಳಿಸಿದೆ.
"ಇದು ವಿಶ್ವಾದ್ಯಂತ ಫುಟ್ಬಾಲ್ನ ಪ್ರಜಾಪ್ರಭುತ್ವೀಕರಣಕ್ಕೆ ಸಂಬಂಧಿಸಿದ ಯೋಜನೆಯಾಗಿದೆ" ಎಂದು ಇನ್ಫಾಂಟಿನೊ ಫಿಫಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಟ್ರಂಪ್–ಇನ್ಫಾಂಟಿನೊ ಸಂಬಂಧದ ಬಗ್ಗೆ ಆತಂಕ
ಈ ತಿಂಗಳು ಮುಕ್ತಾಯಗೊಂಡ ಪುರುಷರ ವಿಶ್ವಕಪ್ ಟೂರ್ನಿಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇನ್ಫಾಂಟಿನೊ ನಡುವಿನ ರಾಜಕೀಯ ಹಾಗೂ ವೈಯಕ್ತಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಸಂಬಂಧದ ಬಗ್ಗೆ UEFA ಸೇರಿದಂತೆ ಹಲವು ವಲಯಗಳಲ್ಲಿ ಆತಂಕ ವ್ಯಕ್ತವಾಗಿದೆ.
211 ಸದಸ್ಯ ರಾಷ್ಟ್ರಗಳಿಗೆ ಹೆಚ್ಚುವರಿ ಅಭಿವೃದ್ಧಿ ನಿಧಿ
ತನ್ನ ಪ್ರಸ್ತಾವಿತ ಯೋಜನೆ ಕುರಿತು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 2038ರವರೆಗೆ 'ಫಿಫಾ ಫಾಸ್ಟ್-ಫಾರ್ವರ್ಡ್ ಪ್ರೋಗ್ರಾಂ' ಅಡಿಯಲ್ಲಿ ತನ್ನ 211 ಸದಸ್ಯ ರಾಷ್ಟ್ರಗಳಿಗೆ ದೊರೆಯುವ ಅಭಿವೃದ್ಧಿ ಅನುದಾನವನ್ನು ಗಣನೀಯವಾಗಿ ಹೆಚ್ಚಿಸಲಾಗುವುದು ಎಂದು ಫಿಫಾ ತಿಳಿಸಿದೆ.
2027–30ರ ವಿಶ್ವಕಪ್ ವಾಣಿಜ್ಯ ಚಕ್ರದಲ್ಲಿ ಈಗಾಗಲೇ ಭರವಸೆ ನೀಡಿರುವ ತಲಾ 8 ಮಿಲಿಯನ್ ಡಾಲರ್ ಅಭಿವೃದ್ಧಿ ನಿಧಿಯನ್ನು 20 ಮಿಲಿಯನ್ ಡಾಲರ್ಗೆ ಹೆಚ್ಚಿಸಲಾಗುವುದು. ನಂತರ ಅದನ್ನು 22 ಮಿಲಿಯನ್ ಡಾಲರ್ ಹಾಗೂ ಮುಂದಿನ ಚಕ್ರಗಳಲ್ಲಿ 24 ಮಿಲಿಯನ್ ಡಾಲರ್ಗೆ ಏರಿಸಲಾಗುವುದು ಎಂದು ತಿಳಿಸಿದೆ.
2026 ವಿಶ್ವಕಪ್ನಿಂದ ದಾಖಲೆ ಆದಾಯ
ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಜಂಟಿ ಆತಿಥ್ಯದಲ್ಲಿ ನಡೆದ 2026ರ ವಿಶ್ವಕಪ್ನಿಂದ ಫಿಫಾ ಸುಮಾರು 12 ಶತಕೋಟಿ ಡಾಲರ್ ದಾಖಲೆ ಆದಾಯ ಗಳಿಸಿದೆ. ಟಿಕೆಟ್ ಹಾಗೂ ಆತಿಥ್ಯ ಸೇವೆಗಳ ಅಭೂತಪೂರ್ವ ದರಗಳು ಇದಕ್ಕೆ ಪ್ರಮುಖ ಕಾರಣವಾಗಿದ್ದವು.
2030ರ ಪುರುಷರ ವಿಶ್ವಕಪ್ಗೆ ಸ್ಪೇನ್, ಪೋರ್ಚುಗಲ್ ಮತ್ತು ಮೊರಾಕೊ ಜಂಟಿಯಾಗಿ ಆತಿಥ್ಯ ವಹಿಸಲಿದ್ದು, 2026ರಷ್ಟು ಆದಾಯವನ್ನು ಅಲ್ಲಿಯೂ ಹೇಗೆ ಸಾಧಿಸಲಾಗುವುದು ಎಂಬುದು ಈಗಾಗಲೇ ಸ್ಪಷ್ಟವಾಗಿಲ್ಲ.
ಹೊಸ ಹಣಕಾಸು ಅವಕಾಶಗಳಲ್ಲಿ ಪಾಲ್ಗೊಳ್ಳಬೇಕೇ ಬೇಡವೇ ಎಂಬುದನ್ನು ಸದಸ್ಯ ಸಂಘಗಳೇ ಆಯ್ಕೆ ಮಾಡಬಹುದು ಎಂದು ಫಿಫಾ ತಿಳಿಸಿದೆ.
"FFE ಮೇಲಿನ ಸಂಪೂರ್ಣ ನಿಯಂತ್ರಣ, ಫುಟ್ಬಾಲ್ ಆಡಳಿತ, ಸ್ಪರ್ಧೆಗಳು, ಪಂದ್ಯಗಳ ಕ್ಯಾಲೆಂಡರ್ ಹಾಗೂ ಎಲ್ಲ ನಿಯಂತ್ರಣ ಮತ್ತು ಕ್ರೀಡಾ ಸಂಬಂಧಿತ ನಿರ್ಧಾರಗಳ ಮೇಲಿನ ವಿಶೇಷ ಅಧಿಕಾರ ಫಿಫಾ ಬಳಿಯೇ ಉಳಿಯಲಿದೆ" ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈ ಪ್ರಸ್ತಾಪದ ಕುರಿತು ಫಿಫಾ, ಇನ್ಫಾಂಟಿನೊ ಅಧ್ಯಕ್ಷತೆಯ ಆಡಳಿತ ಮಂಡಳಿ ಹಾಗೂ 211 ಸದಸ್ಯ ರಾಷ್ಟ್ರಗಳು ಯಾವಾಗ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿವೆ ಎಂಬ ವೇಳಾಪಟ್ಟಿಯನ್ನು ಮಂಗಳವಾರದವರೆಗೆ ಪ್ರಕಟಿಸಿಲ್ಲ.
ಇದೇ ವೇಳೆ, 2031 ಮತ್ತು 2035ರ ಮಹಿಳಾ ವಿಶ್ವಕಪ್ ಆತಿಥೇಯ ರಾಷ್ಟ್ರಗಳನ್ನು ಅಧಿಕೃತವಾಗಿ ದೃಢೀಕರಿಸಲು ಫಿಫಾ ನವೆಂಬರ್ 23ರಂದು ಆನ್ಲೈನ್ ಸಭೆ ನಡೆಸಲು ನಿರ್ಧರಿಸಿದೆ.






