UFC 319: ಡು ಪ್ಲೆಸಿಸ್ ಅನ್ನು ಮಣಿಸಿ ಮಿಡಲ್ ವೇಟ್ ಚಾಂಪಿಯನ್ ಶಿಪ್ ಅನ್ನು ಮುಡಿಗೇರಿಸಿಕೊಂಡ ಚಿಮೇವ್

PC : @ChampRDS
ಶಿಕಾಗೊ, ಆ. 17: ಅಮೆರಿಕದ ಶಿಕಾಗೊದಲ್ಲಿರುವ ಯುನೈಟೆಡ್ ಸೆಂಟರ್ನಲ್ಲಿ ನಡೆದ ಯುಎಫ್ಸಿ ಮಿಕ್ಸಡ್ ಮಾರ್ಶಲ್ ಆರ್ಟ್ಸ್ (ಎಮ್ಎಮ್ಎ) ಮಿಡಲ್ ವೇಟ್ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಡ್ರಿಕಸ್ ಡು ಪ್ಲೆಸಿಸ್ ಮೇಲೆ ಏಕಪಕ್ಷೀಯ ಪಾರಮ್ಯ ಸಾಧಿಸಿದ ಖಮ್ಝತ್ ಚಿಮೇವ್, ಯುಎಫ್ಸಿ ಮಿಡಲ್ ವೇಟ್ ಚಾಂಪಿಯನ್ಶಿಪ್ ಮುಡಿಗೇರಿಸಿಕೊಂಡಿದ್ದಾರೆ.
ಯುಎಫ್ಸಿ ಮಿಡಲ್ ವೇಟ್ನಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಡ್ರಿಕಸ್ ಡು ಪ್ಲೆಸಿಸ್ ಈ ಪಂದ್ಯಾವಳಿಯಲ್ಲಿ ಮೂರನೇ ಬಾರಿಗೆ ಚಿಮೇವ್ರನ್ನು ಎದುರಿಸಿದರು. ಈ ಪಂದ್ಯದಲ್ಲಿ ಬಲಿಷ್ಠ ಹೊಡೆತಗಳ ಡ್ರಿಕಸ್ ಡು ಪ್ಲೆಸಿಸ್ ಅವರನ್ನೇ ಪಂದ್ಯದ ಫೇವರಿಟ್ ಆಗಿ ಬಿಂಬಿಸಲಾಗಿತ್ತು.
ಆದರೆ, ಆರಂಭದ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದ ಖಮ್ಝತ್ ಚಿಮೇವ್, ಇದೇ ಪ್ರಥಮ ಬಾರಿಗೆ ಏಕಪಕ್ಷೀಯವಾಗಿ ಯುಎಫ್ಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ರಶ್ಯ ಮತ್ತು ಯುಎಇ ಎರಡೂ ದೇಶಗಳ ಪೌರತ್ವ ಹೊಂದಿರುವ ಚೆಚೆನ್ಯಾದ ಕುಸ್ತಿ ಪಟು ಖಮ್ಝತ್ ಚಿಮೇವ್ ಪರವಾಗಿ ಎಲ್ಲಾ ಮೂವರು ರೆಫರಿಗಳು 50-44 ಅಂಕಗಳ ಅಂತರದ ತೀರ್ಪು ನೀಡಿದರು.
ಪಂದ್ಯ ಮುಕ್ತಾಯಗೊಂಡ ನಂತರ ಪ್ರತಿಕ್ರಿಯಿಸಿದ ಚಿಮೇವ್, ‘‘ನಾನು ಯಾವಾಗಲೂ ಖುಷಿಯಾಗಿರುತ್ತೇನೆ. ನಾನು ಪಂದ್ಯಕ್ಕಾಗಿ ಯಾವುದೇ ಯೋಜನೆ ರೂಪಿಸಿರಲಿಲ್ಲ. ನಾನು ಜಿಮ್ನಲ್ಲಿ ಏನು ಮಾಡುತ್ತೇನೆಯೋ ಅದನ್ನೇ ಪಂದ್ಯದಲ್ಲೂ ಮಾಡಿದೆ. ಆ ವ್ಯಕ್ತಿ (ಡು ಪ್ಲೆಸಿಸ್) ತುಂಬಾ ಬಲಿಷ್ಠ. ಅವರನ್ನು ಕೆಳಗೆ ಉರುಳಿಸಲು ನನಗೆ ಸಾಧ್ಯವಾಗಲಿಲ್ಲ. ಅವರ ಮೇಲೆ ನನಗೆ ಗೌರವವಿದೆ. ನನ್ನ ಹೆಸರು ಹೇಳುವ ಏಕೈಕ ಚಾಂಪಿಯನ್ ಅವರು ಮಾತ್ರ. ಅವರಿಗೆ ತುಂಬಾ ವಿಶಾಲ ಹೃದಯವಿದೆ’’ ಎಂದು ಹೇಳಿದರು.
ಚಿಮೇವ್ರ ಈ ಗೆಲುವಿನೊಂದಿಗೆ ಅವರ ಒಟ್ಟಾರೆ ಗೆಲುವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇದೇ ಪ್ರಥಮ ಬಾರಿಗೆ ಯುಎಫ್ಸಿಯಲ್ಲಿ ಸೋಲು ಅನುಭವಿಸಿರುವ ಡು ಪ್ಲೆಸಿಸ್ರ ಮಿಕ್ಸಡ್ ಮಾರ್ಶಲ್ ಆರ್ಟ್ಸ್ ವೃತ್ತಿ ಜೀವನದ ಶ್ರೇಯಾಂಕ 23-3ಕ್ಕೆ ಕುಸಿದಿದೆ.







