ಅಂಡರ್-19 ಕ್ರಿಕೆಟ್ ವಿಶ್ವಕಪ್|ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗೆಲುವು

PC : timesofindia
ಹರಾರೆ, ಜ.24: ಆರ್.ಎಸ್. ಅಂಬರೀಷ್(4-29) ಅಮೋಘ ಬೌಲಿಂಗ್ ಹಾಗೂ ನಾಯಕ ಆಯುಷ್ ಮ್ಹಾತ್ರೆ ಬಿರುಸಿನ ಅರ್ಧಶತಕದ(53 ರನ್,27 ಎಸೆತ, 2 ಬೌಂಡರಿ,6 ಸಿಕ್ಸರ್) ನೆರವಿನಿಂದ ಭಾರತ ಕ್ರಿಕೆಟ್ ತಂಡವು ಅಂಡರ್-19 ಕ್ರಿಕೆಟ್ ವಿಶ್ವಕಪ್ನಲ್ಲಿ ಶನಿವಾರ ಆಡಿದ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಏಳು ವಿಕೆಟ್ಗಳ ಅಂತರದಿಂದ ಮಣಿಸಿತು.
ಭಾರತ ತಂಡವು ‘ಬಿ’ ಗುಂಪಿನಲ್ಲಿ ಆಡಿರುವ ಎಲ್ಲ ಮೂರೂ ಪಂದ್ಯಗಳಲ್ಲಿ ಜಯ ದಾಖಲಿಸಿ ಅಜೇಯ ದಾಖಲೆಯೊಂದಿಗೆ ಅಗ್ರ ಸ್ಥಾನಕ್ಕೇರಿದೆ.
ಮೊದಲು ಫೀಲ್ಡಿಂಗ್ ಆಯ್ದುಕೊಂಡಿರುವ ಭಾರತ ತಂಡವು ಪವರ್ಪ್ಲೇ ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಕಾಡಲಾರಂಭಿಸಿತು.
ಮಳೆಯಿಂದಾಗಿ ಪಂದ್ಯ ನಿಂತಾಗ ಕಿವೀಸ್ 17 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡಿತು. ಮತ್ತೆ ಪಂದ್ಯ ಆರಂಭವಾದಾಗ ಇನಿಂಗ್ಸನ್ನು 37 ಓವರ್ಗಳಿಗೆ ಕಡಿತಗೊಳಿಸಲಾಯಿತು. ಕಿವೀಸ್ 69 ರನ್ಗೆ 7 ವಿಕೆಟ್ ಕಳೆದುಕೊಂಡಿತು. ಆಗ ಕಾಲುಮ್ ಸ್ಯಾಮ್ಸನ್(ಔಟಾಗದೆ 37)ಹಾಗೂ ಸೆಲ್ವಿನ್ ಸಂಜಯ್(28 ರನ್)ಎಂಟನೇ ವಿಕೆಟ್ಗೆ 53 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಕಿವೀಸ್ 36.2 ಓವರ್ಗಳಲ್ಲಿ 135 ರನ್ಗೆ ಆಲೌಟಾಯಿತು. ಅಂಬರೀಶ್(4-29) ಹಾಗೂ ಹೆನಿಲ್ ಪಟೆಲ್(3-23) ಏಳು ವಿಕೆಟ್ಗಳನ್ನು ಹಂಚಿಕೊಂಡರು.
ಗೆಲ್ಲಲು ಸುಲಭ ಸವಾಲು ಪಡೆದ ಭಾರತ ತಂಡವು ಎರಡನೇ ಓವರ್ನಲ್ಲಿ ಆರಂಭಿಕ ಆಟಗಾರ ಆ್ಯರೊನ್ ಜಾರ್ಜ್(7 ರನ್) ವಿಕೆಟನ್ನು ಕಳೆದುಕೊಂಡಿತು. ಮ್ಹಾತ್ರೆ ಹಾಗೂ ವೈಭವ್ ಸೂರ್ಯವಂಶಿ(40 ರನ್, 23 ಎಸೆತ, 2 ಬೌಂಡರಿ, 3 ಸಿಕ್ಸರ್) ಕೇವಲ 6.3 ಓವರ್ಗಳಲ್ಲಿ 76 ರನ್ ಕಲೆ ಹಾಕಿದರು.
ಮ್ಹಾತ್ರೆ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವೇದಾಂತ (ಔಟಾಗದೆ 17) ಗೆಲುವಿನ ರನ್ ದಾಖಲಿಸಿದರು. ಭಾರತವು ಉತ್ತಮ ರನ್ರೇಟ್ನೊಂದಿಗೆ ಸೂಪರ್ ಸಿಕ್ಸ್ ಹಂತ ಪ್ರವೇಶಿಸಿದೆ.







