ಅಂಡರ್-19 ಏಕದಿನ ಸರಣಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸತತ ಮೂರನೇ ಜಯ

ವೈಭವ್ ಸೂರ್ಯವಂಶಿ | Photo Credit : X/BCCI
ಬೆನೋನಿ: ಆರಂಭಿಕ ಬ್ಯಾಟರ್ಗಳಾದ ವೈಭವ್ ಸೂರ್ಯವಂಶಿ(127 ರನ್, 74 ಎಸೆತ)ಹಾಗೂ ಆ್ಯರೊನ್ ಜಾರ್ಜ್(118 ರನ್, 106 ಎಸೆತ, 16 ಬೌಂಡರಿ)ದ್ವಿಶತಕದ ಜೊತೆಯಾಟದ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಅಂಡರ್-19 ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 233 ರನ್ಗಳ ಅಂತರದಿಂದ ಮಣಿಸಿದೆ.
ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಭಾರತ ತಂಡವು ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಕ್ಲೀನ್ಸ್ವೀಪ್ ಸಾಧಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಸಲ್ಪಟ್ಟ ಭಾರತ ತಂಡವು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 393 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು ಕಿಶನ್ ಸಿಂಗ್(3-15)ಹಾಗೂ ಮುಹಮ್ಮದ್ ಎನಾನ್(2-8) ಬೌಲಿಂಗ್ ದಾಳಿಗೆ ತತ್ತರಿಸಿ 35 ಓವರ್ಗಳಲ್ಲಿ 160 ರನ್ ಗಳಿಸಿ ಆಲೌಟಾಯಿತು.
ದಕ್ಷಿಣ ಆಫ್ರಿಕಾದ ಪರ ಪೌಲ್ ಜೇಮ್ಸ್(41 ರನ್, 49 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಡೇನಿಯಲ್ ಬೋಸ್ಮನ್(40 ರನ್, 60 ಎಸೆತ), ಕಾರ್ನ್ ಬೋಥಾ(ಔಟಾಗದೆ 36)ಎರಡಂಕೆಯ ಸ್ಕೋರ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ ಅಂಡರ್-19 ತಂಡ: 393/7
(ವೈಭವ್ ಸೂರ್ಯವಂಶಿ 127, ಆ್ಯರೊನ್ ಜಾರ್ಜ್ 118, ಸೋನಿ 3-61, ಜೇಸನ್ ರೋಲ್ಸ್ 2-59)
ದಕ್ಷಿಣ ಆಫ್ರಿಕಾ ಅಂಡರ್-19 ತಂಡ: 35 ಓವರ್ಗಳಲ್ಲಿ 160 ರನ್ಗೆ ಆಲೌಟ್
(ಪೌಲ್ ಜೇಮ್ಸ್ 41, ಬೋಸ್ಮನ್ 40, ಬೋಥ 36, ಕಿಶನ್ ಸಿಂಗ್ 3-15, ಮುಹಮ್ಮದ್ ಎನಾನ್ 2-36)
ಪಂದ್ಯಶ್ರೇಷ್ಠ: ವೈಭವ್ ಸೂರ್ಯವಂಶಿ.
ಸೂರ್ಯವಂಶಿ ಶತಕದ ‘ವೈಭವ’
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆಯುತ್ತಿರುವ ಅಂಡರ್-19 ಏಕದಿನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ತನ್ನ ಕನಸಿನ ಓಟ ಮುಂದುವರಿಸಿದ್ದಾರೆ. ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 63 ಎಸೆತಗಳಲ್ಲಿ ಮತ್ತೊಂದು ಶತಕ ಸಿಡಿಸಿ ಮಿಂಚಿದರು. ಇದು ಯೂತ್ ಏಕದಿನ ಕ್ರಿಕೆಟ್ನಲ್ಲಿ ಸೂರ್ಯವಂಶಿ ಗಳಿಸಿದ ಮೂರನೇ ಶತಕವಾಗಿದೆ.
ಸೂರ್ಯವಂಶಿ ಕೇವಲ 74 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 9 ಬೌಂಡರಿಗಳ ಸಹಿತ 127 ರನ್ ಗಳಿಸಿ ಪ್ರಾಬಲ್ಯ ಮೆರೆದರು.
14ರ ಬಾಲಕ ಸೂರ್ಯವಂಶಿ ಖಾಯಂ ನಾಯಕ ಆಯುಷ್ ಮ್ಹಾತ್ರೆ ಅನುಪಸ್ಥಿತಿಯಲ್ಲಿ ಪ್ರಸಕ್ತ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಿದರು. ಅಗ್ರ ಸರದಿಯಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ಉತ್ತಮ ಆರಂಭವನ್ನು ಶತಕವಾಗಿ ಪರಿವರ್ತಿಸಿದ ಸೂರ್ಯವಂಶಿ ಅಂಡರ್-19 ಕ್ರಿಕೆಟ್ನಲ್ಲಿ ತನ್ನ ಆರ್ಭಟ ಮುಂದುವರಿಸಿದರು. ಕಳೆದ ವರ್ಷ ಅಂಡರ್-19 ಕ್ರಿಕೆಟ್ನಲ್ಲಿ ವೇಗದ ಶತಕವನ್ನು (52 ಎಸೆತಗಳು) ಗಳಿಸಿದ್ದರು.
ಎರಡನೇ ಪಂದ್ಯದಲ್ಲಿ ಎಡಗೈ ಬ್ಯಾಟರ್ ಸೂರ್ಯವಂಶಿ 24 ಎಸೆತಗಳಲ್ಲಿ 10 ಸಿಕ್ಸರ್ಗಳ ಸಹಿತ 68 ರನ್ ಗಳಿಸಿದ್ದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ್ದರು. ಇದು ಯೂತ್ ಏಕದಿನದಲ್ಲಿ ವೇಗದ ಅರ್ಧಶತಕವಾಗಿದೆ.







