ಅಂಡರ್-19 ಟಿ20 ಮಹಿಳಾ ವಿಶ್ವಕಪ್ ಪಂದ್ಯಾವಳಿ | ಸ್ಕಾಟ್ಲ್ಯಾಂಡ್ಗೆ 150 ರನ್ ಸೋಲುಣಿಸಿದ ಭಾರತ
ತೃಶಾ ಗೊಂಗಾಡಿ ಚೊಚ್ಚಲ ಶತಕ

PC | ICC
ಕೌಲಾಲಂಪುರ: ಐಸಿಸಿ ಅಂಡರ್-19 ಮಹಿಳೆಯರ ಟಿ20 ವಿಶ್ವಕಪ್ನ ಸೂಪರ್ ಸಿಕ್ಸ್ ಪಂದ್ಯವೊಂದರಲ್ಲಿ ಮಂಗಳವಾರ ತೃಶಾ ಗೊಂಗಾಡಿಯ ಚೊಚ್ಚಲ ಶತಕದ ನೆರವಿನಿಂದ ಭಾರತವು ಸ್ಕಾಟ್ಲ್ಯಾಂಡ್ ತಂಡವನ್ನು ಭರ್ಜರಿ 150 ರನ್ಗಳ ಅಂತರದಿಂದ ಸೋಲಿಸಿದೆ.
ಕೌಲಾಲಂಪುರದ ಬಯುವೇಮಸ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ತೃಶಾ 59 ಎಸೆತಗಳಲ್ಲಿ 110 ರನ್ಗಳನ್ನು ಸಿಡಿಸಿದರು ಹಾಗೂ ಅಂಡರ್-19 ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ್ತಿಯಾದರು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
19 ವರ್ಷದ ತೃಶಾ ಈ ಪಂದ್ಯಾವಳಿಯ ಗರಿಷ್ಠ ರನ್ ಗಳಿಕೆದಾರರೂ ಆದರು. ಅವರು ಐದು ಪಂದ್ಯಗಳಲ್ಲಿ 230 ರನ್ಗಳನ್ನು ಕಲೆಹಾಕಿದ್ದಾರೆ.
ಟಾಸ್ ಗೆದ್ದ ಸ್ಕಾಟ್ಲ್ಯಾಂಡ್ ಮೊದಲು ಎದುರಾಳಿಯನ್ನು ಬ್ಯಾಟಿಂಗ್ಗೆ ಇಳಿಸಿತು. ತೃಶಾ ಮತ್ತು ಸನಿಕಾ ಚಲ್ಕೆ (29 ಅಜೇಯ) ಭಾರತೀಯ ಇನಿಂಗ್ಸನ್ನು ನಿಗದಿತ 20 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 207 ರನ್ವರೆಗೆ ಮುನ್ನಡೆಸಿದರು. ಇದು ಪ್ರಸಕ್ತ ಪಂದ್ಯಾವಳಿಯಲ್ಲಿ ತಂಡವೊಂದರ ಗರಿಷ್ಠ ಮೊತ್ತ ಮಾತ್ರವಲ್ಲ, ಪಂದ್ಯಾವಳಿಯ ಎರಡು ಆವೃತ್ತಿಗಳ ಎರಡನೇ ಗರಿಷ್ಠ ಮೊತ್ತವೂ ಆಗಿದೆ.
ಆರಂಭಿಕರಾದ ಕಮಲಿನಿ ಜಿ (51) ಮತ್ತು ತೃಶಾ ಸರಣಿ ಬೌಂಡರಿಗಳನ್ನು ಸಿಡಿಸಿದರು. ಪವರ್ಪ್ಲೇ ಮುಗಿದಾಗ ಭಾರತವು ವಿಕೆಟ್ ನಷ್ಟವಿಲ್ಲದೆ 67 ರನ್ ಗಳಿಸಿತ್ತು. 10ನೇ ಓವರ್ ವೇಳೆಗೆ, ಭಾರತದ ಮೊತ್ತವು ವಿಕೆಟ್ ನಷ್ಟವಿಲ್ಲದೆ 104 ಆಗಿತ್ತು. ಕಮಲಿನಿ ಮತ್ತು ತೃಶಾ ಮೊದಲ ವಿಕೆಟ್ಗೆ 147 ರನ್ಗಳನ್ನು ಸೇರಿಸಿದರು. ಇದು ಈ ಪಂದ್ಯಾವಳಿಯಲ್ಲಿ ಅತಿ ದೊಡ್ಡ ಭಾಗೀದಾರಿಕೆಯಾಯಿತು.
ಗೆಲ್ಲಲು 209 ರನ್ಗಳ ಗುರಿಯನ್ನು ಪಡೆದ ಸ್ಕಾಟ್ಲ್ಯಾಂಡ್ಗೆ 14 ಓವರ್ಗಳಲ್ಲಿ ಕೇವಲ 58 ರನ್ಗಳನ್ನು ಗಳಿಸಲು ಸಾಧ್ಯವಾಯಿತು.
ತೃಶಾ ಬ್ಯಾಟಿಂಗ್ನಲ್ಲಿ ಮಾತ್ರವಲ್ಲ, ಬೌಲಿಂಗ್ನಲ್ಲೂ ತನ್ನ ಚಾಕಚಕ್ಯತೆಯನ್ನು ಪ್ರದರ್ಶಿಸಿದರು. ಅವರು ಎರಡು ಓವರ್ಗಳಲ್ಲಿ ಕೇವಲ ಆರು ರನ್ಗಳನ್ನು ನೀಡಿ ಮೂರು ವಿಕೆಟ್ಗಳನ್ನು ಉರುಳಿಸಿದರು.
ಆಯುಶಿ ಶುಕ್ಲಾ ಮೂರು ಓವರ್ಗಳಲ್ಲಿ 8 ರನ್ಗಳನ್ನು ನೀಡಿ ನಾಲ್ಕು ವಿಕೆಟ್ಗಳನ್ನು ಪಡೆದರು. ವೈಷ್ಣವಿ ಶರ್ಮಾ 2 ಓವರ್ಗಳಲ್ಲಿ ಕೇವಲ 5 ರನ್ಗಳನ್ನು ಕೊಟ್ಟು 3 ವಿಕೆಟ್ಗಳನ್ನು ಗಳಿಸಿದರು.
ಇದಕ್ಕೂ ಮೊದಲು, ದಕ್ಷಿಣ ಆಫ್ರಿಕ ಮತ್ತು ಅಮೆರಿಕ ನಡುವೆ ನಡೆಯಬೇಕಾಗಿದ್ದ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಹಾಗಾಗಿ, ಗುಂಪು 2ರಲ್ಲಿ ದಕ್ಷಿಣ ಆಫ್ರಿಕವು ಅಗ್ರ ಸ್ಥಾನಕ್ಕೇರಿತು.
ಇನ್ನೊಂದು ಪಂದ್ಯದಲ್ಲಿ, ಬಾಂಗ್ಲಾದೇಶವು ವೆಸ್ಟ್ ಇಂಡೀಸ್ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿತು.







