ಅಂಡರ್ 19 ವಿಶ್ವಕಪ್ | ಗುಂಪು ಹಂತದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಿಲ್ಲ!

ಸಾಂದರ್ಭಿಕ ಚಿತ್ರ | Photo Credit ; NDTV
ದುಬೈ: ಜ. 15, 2026ರಿಂದ 19 ವರ್ಷದೊಳಗಿನ ಪುರುಷರ ಐಸಿಸಿ ವಿಶ್ವಕಪ್ ಪ್ರಾರಂಭವಾಗಲಿದ್ದು, ಈ ಟೂರ್ನಿ ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಆದರೆ, ಈ ಬಾರಿ ಪ್ರಕಟವಾಗಿರುವ ಪಂದ್ಯಗಳ ವೇಳಾಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರತ್ಯೇಕ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾದಾಗ ಉಭಯ ತಂಡಗಳ ಆಟಗಾರರು ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದರಿಂದ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೂ ಮುನ್ನ, ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯ ಬಳಿಕ ನಡೆದಿದ್ದ ಏಶ್ಯ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದವು. ಆದರೆ, ಒಮ್ಮೆಯೂ ಕೂಡಾ ಉಭಯ ತಂಡಗಳ ಆಟಗಾರರು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿರಲಿಲ್ಲ. ಬದಲಿಗೆ, ಮೈದಾನವನ್ನೇ ಯುದ್ಧ ಭೂಮಿ ಎಂಬಂತೆ ಬಿಂಬಿಸಿ, ಕ್ರೀಡಾ ಸ್ಫೂರ್ತಿಗೆ ಧಕ್ಕೆಯಾಗುವಂತೆ ನಡೆದುಕೊಂಡಿದ್ದವು. ಉಭಯ ತಂಡಗಳ ಈ ವರ್ತನೆಯ ವಿರುದ್ಧ ಜಾಗತಿಕ ಕ್ರೀಡಾ ರಂಗದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.





