ಏಕದಿನ ವಿಶ್ವಕಪ್ ಟೂರ್ನಿಯ ಮರೆಯಲಾರದ ಕ್ಷಣಗಳು…

Photo: Twitter
ಹೊಸದಿಲ್ಲಿ: ಭಾರತದಲ್ಲಿ ಆತಿಥ್ಯದಲ್ಲಿ ಈ ಬಾರಿ ನಡೆಯುವ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯು ಅ.5ರಂದು ಅಹಮದಾಬಾದ್ ನಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ 2019ರ ಆವೃತ್ತಿಯ ಫೈನಲಿಸ್ಟ್ ಗಳಾದ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ಮುಖಾಮುಖಿಯಾಗಲಿವೆ. ಕಳೆದ 12 ಆವೃತ್ತಿಗಳ ವಿಶ್ವಕಪ್ ನಲ್ಲಿ ಕಂಡು ಬಂದ ಮರೆಯಲಾರದ ಕ್ಷಣಗಳತ್ತ ಒಂದು ನೋಟ…
2011 ಫೈನಲ್ ನಲ್ಲಿ ಎಂ.ಎಸ್ .ಧೋನಿ ಸಿಕ್ಸರ್
ಶ್ರೀಲಂಕಾ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಮ್ ನಲ್ಲಿ ನಡೆದ ಫೈನಲ್ ಪಂದ್ಯದ 49 ನೇ ಓವರ್ ನಲ್ಲಿ ನುವಾನ್ ಕುಲಸೇಕರ ಬೌಲಿಂಗ್ ನಲ್ಲಿ ನಾಯಕ ಎಂ.ಎಸ್. ಧೋನಿ(ಔಟಾಗದೆ 91 ರನ್) ಬ್ಯಾಟ್ ನಿಂದ ಸಿಡಿದ ಸಿಕ್ಸರ್ ನ ನೆರವಿನಿಂದ ಭಾರತವು ಇತಿಹಾಸದಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಧೋನಿ ಗಳಿಸಿದ ಸಿಕ್ಸರ್ ನಿಂದಾಗಿ ಭಾರತ ತವರು ನೆಲದಲ್ಲಿ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಅಂತ್ಯಗೊಳಿಸಿತು. ಕಾಮೆಂಟರಿ ಬಾಕ್ಸ್ ನಿಂದ ರವಿ ಶಾಸ್ತ್ರಿ ಅವರು 'ಧೋನಿ ತನ್ನದೇ ಶೈಲಿಯಲ್ಲಿ ಪಂದ್ಯವನ್ನು ಮುಗಿಸಿದರು. ಜನರ ಸಂತೋಷಕ್ಕೆ ಪಾರವೇ ಇಲ್ಲ! 'ಎಂದು ಉದ್ಗರಿಸಿದರು.
ಸ್ಕಾಟ್ಲೆಂಡ್ ವಿರುದ್ಧ ಮೊದಲ ಜಯ ಸಾಧಿಸಿದ ಅಫ್ಘಾನಿಸ್ತಾನ
2015ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ಕ್ರಿಕೆಟ್ ವಿಶ್ವಕಪ್ ನಲ್ಲಿ ಮೊದಲ ಬಾರಿ ಭಾಗವಹಿಸಿದ್ದ ಅಫ್ಘಾನಿಸ್ತಾನ ತಂಡ ಜಾಗತಿಕ ಈವೆಂಟ್ ನಲ್ಲಿ ತನ್ನ ಮೊದಲ ಗೆಲುವಿನೊಂದಿಗೆ ಅತಿದೊಡ್ಡ ವೇದಿಕೆಯನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಗೆಲ್ಲಲು 211 ರನ್ ಗುರಿ ಪಡೆದಿದ್ದ ಅಫ್ಘಾನಿಸ್ತಾನ ತಂಡ ಸ್ಕಾಟ್ಲೆಂಡ್ ನ ಶಿಸ್ತಿನ ಬೌಲಿಂಗ್ ನ ವಿರುದ್ಧ ದಿಟ್ಟ ಪ್ರದರ್ಶನ ನೀಡಿತು. ಕೊನೆಯ ವಿಕೆಟ್ ಗೆ ಹಮೀದ್ ಹಸನ್ (15 ರನ್) ಹಾಗೂ ಶಪೂರ್ ಝದ್ರಾನ್ (ಔಟಾಗದೆ 12) ಸಾಹಸದಿಂದ ಸ್ಮರಣೀಯ 1 ವಿಕೆಟ್ ನ ರೋಚಕ ಜಯ ಸಾಧಿಸಿತು.
ಕೆವಿನ್ ಒ’ಬ್ರಿಯಾನ್ ಸಾಹಸ, ಇಂಗ್ಲೆಂಡ್ ಅನ್ನು ಸೋಲಿಸಿದ ಐರ್ ಲ್ಯಾಂಡ್ (2011)
2011ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ನ ಆಕರ್ಷಕ ಆರಂಭಕ್ಕೆ ಬೆಂಗಳೂರಿನಲ್ಲಿ ಐರ್ ಲ್ಯಾಂಡ್ ತಂಡದ ಕೆವಿನ್ ಒ’ಬ್ರಿಯಾನ್ ಬ್ರೇಕ್ ಹಾಕಿದರು. 328 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ್ದ ಐರ್ ಲ್ಯಾಂಡ್ ಒಂದು ಹಂತದಲ್ಲಿ 111 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು, ಇಂಗ್ಲೆಂಡ್ ತನ್ನ ಮೂರು ಪಂದ್ಯಗಳಲ್ಲಿ ಐದು ಪಾಯಿಂಟ್ ಗಳನ್ನು ಪಡೆದುಕೊಳ್ಳುವ ಹಾದಿಯಲ್ಲಿತ್ತು. ಆದಾಗ್ಯೂ, ಕೆವಿನ್ ಒ'ಬ್ರಿಯಾನ್ ಅವರು 63 ಎಸೆತಗಳಲ್ಲಿ ಸಿಡಿಸಿದ 113 ರನ್ ಪಂದ್ಯದ ದಿಕ್ಕು ತಪ್ಪಿಸಿತು. ಪಂದ್ಯದ ಅಂತಿಮ ಓವರ್ನಲ್ಲಿ ಐರ್ ಲ್ಯಾಂಡ್ 7 ವಿಕೆಟ್ ನಷ್ಟಕ್ಕೆ 329 ರನ್ ಗಳಿಸಿ ಪ್ರತಿಸ್ಪರ್ಧಿಗೆ ಭಾರೀ ಆಘಾತ ನೀಡಿತು.
ಭಾರತದ ವಿರುದ್ಧ ಬರ್ಮುಡಾದ ಡ್ವೇನ್ ಲೆವೆರಾಕ್ ರಿಂದ ಅದ್ಭುತ ಕ್ಯಾಚ್
2007 ರ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಅದ್ಭುತವಾದ ಕ್ಯಾಚ್ ಪಡೆದ ಬರ್ಮುಡಾ ತಂಡದ ಆಟಗಾರ ಡ್ವೇನ್ ಲೆವೆರಾಕ್ ಎಲ್ಲರ ಗಮನ ಸೆಳೆದಿದ್ದರು. ರಾಬಿನ್ ಉತ್ತಪ್ಪ ನೀಡಿದ ಕ್ಯಾಚನ್ನು ಪಡೆದ ಲೆವೆರಾಕ್ ಮೈದಾನದ ತುಂಬೆಲ್ಲಾ ಕುಣಿದು ಸಂಭ್ರಮಾಚರಣೆ ನಡೆಸಿದರು.
ರಿಚರ್ಡ್ಸ್ ಮೂರು ರನ್ ಔಟ್: ವಿಂಡೀಸ್ ಗೆ ಚೊಚ್ಚಲ ವಿಶ್ವಕಪ್
ವಿವಿಯನ್ ರಿಚರ್ಡ್ಸ್ ಚೊಚ್ಚಲ ಕ್ರಿಕೆಟ್ ವಿಶ್ವಕಪ್ ನಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. ಅವರ ಬ್ಯಾಟಿಂಗ್ ವೈಫಲ್ಯವು ಫೈನಲ್ ಪಂದ್ಯದಲ್ಲೂ ಮುಂದುವರಿಯಿತು, ಫೈನಲ್ ನಲ್ಲಿ ಅವರು ಕೇವಲ ಐದು ರನ್ ಗಳಿಸಿದರು. ಆದಾಗ್ಯೂ, ಯುವ ಆ್ಯಂಟುಗುವಾ ಆಟಗಾರ ಪಂದ್ಯದ ಮೇಲೆ ತನ್ನ ಗುರುತು ಮೂಡಿಸಲು ಮರೆಯಲಿಲ್ಲ. ಆಸ್ಟ್ರೇಲಿಯ 292 ರನ್ ಬೆನ್ನಟ್ಟುತ್ತಿದ್ದಾಗ ನಿರ್ಣಾಯಕ ಹಂತಗಳಲ್ಲಿ ಮೂರು ರನ್ ಔಟ್ ಮಾಡಿದ ರಿಚರ್ಡ್ಸ್ ವೆಸ್ಟ್ ಇಂಡೀಸ್ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆಲ್ಲುವಲ್ಲಿ ನೆರವಾದರು
2003 ರ ಫೈನಲ್ ನಲ್ಲಿ ಭಾರತವನ್ನು ಬೆಂಡೆತ್ತಿದ್ದ ರಿಕಿ ಪಾಂಟಿಂಗ್
2003 ವಿಶ್ವಕಪ್ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ಮಧ್ಯಮ ಓವರ್ ಗಳಲ್ಲಿ ಹರ್ಭಜನ್ ಸಿಂಗ್ (2-49) ಸ್ಪಿನ್ ಮೋಡಿಯಿಂದ ತಾತ್ಕಾಲಿಕವಾಗಿ ಹಿನ್ನಡೆ ಕಂಡಿತ್ತು. ಈ ಪಂದ್ಯವು ಪಾಂಟಿಂಗ್ ಅವರ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಿತು. ರಿಕಿ ಪಾಂಟಿಂಗ್ ಔಟಾಗದೆ 140 ರನ್ ಗಳಿಸಿ ಆಸ್ಟ್ರೇಲಿಯ ತಂಡ ವಿಶ್ವಕಪ್ ಫೈನಲ್ ನಲ್ಲಿ ಅತ್ಯಧಿಕ ಮೊತ್ತ(2 ವಿಕೆಟಿಗೆ 359 ರನ್) ಗಳಿಸಲು ಸಹಾಯ ಮಾಡಿದರು. ಅಂತಿಮವಾಗಿ ಆಸ್ಟ್ರೇಲಿಯ 125 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತು..
ಗಪ್ಟಿಲ್ ನೇರ ಎಸೆತಕ್ಕೆ ಎಂ.ಎಸ್. ಧೋನಿ ರನೌಟ್ (2019)
2019 ರ ವಿಶ್ವಕಪ್ ಸೆಮಿ-ಫೈನಲ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಎಂ.ಎಸ್. ಧೋನಿ ಅವರ ಹೋರಾಟಕಾರಿ ಇನಿಂಗ್ಸ್ (50 ರನ್) ರನೌಟ್ ನೊಂದಿಗೆ ಕೊನೆಗೊಂಡಿತ್ತು. 49 ನೇ ಓವರ್ ನಲ್ಲಿ ಮಾರ್ಟಿನ್ ಗಪ್ಟಿಲ್ ಅವರ ನಿಖರವಾದ ಥ್ರೋ ಭಾರತದ ವಿಶ್ವ ವೈಭವದ ಕೊನೆಯ ಭರವಸೆಯನ್ನು ಕೊನೆಗೊಳಿಸಿತ್ತು. ಗೆಲ್ಲಲು 240 ರನ್ ಗುರಿ ಪಡೆದಿದ್ದ ಭಾರತ 48.3 ಓವರ್ ಗಳಲ್ಲಿ 221 ರನ್ ಗಳಿಸಿ 18 ರನ್ ನಿಂದ ಸೋಲುಂಡಿತು.
2020 ರಲ್ಲಿ ಧೋನಿ ಅವರು ಕ್ರಿಕೆಟ್ ನಿಂದ ನಿವೃತ್ತಿ ಆಗುವುದರೊಂದಿಗೆ ಇದು ಧೋನಿಯ ಅಂತಿಮ ಅಂತರಾಷ್ಟ್ರೀಯ ಇನಿಂಗ್ಸ್ ಕೂಡ ಆಯಿತು.
2015ರ ಫೈನಲ್ ನಲ್ಲಿ ಮೆಕಲಮ್ ಗೆ ಸ್ಟಾರ್ಕ್ ಶಾಕ್
2015ರ ವಿಶ್ವಕಪ್ ಫೈನಲ್ ಪಂದ್ಯದ ಮೊದಲ ಓವರ್ ನಲ್ಲಿಯೇ ಮಿಚೆಲ್ ಸ್ಟಾರ್ಕ್ (2-20)ಅವರ ಯಾರ್ಕರ್ ನ್ಯೂಝಿಲ್ಯಾಂಡ್ ನಾಯಕ ಬ್ರೆಂಡನ್ ಮೆಕಲಮ್ ವಿಕೆಟ್ ಉರುಳಿಸಿತು.
ಪಂದ್ಯಾವಳಿಯ ಆರಂಭಿಕ ಓವರ್ ಗಳಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ ಗಳನ್ನು ಹೊಂದಿದ್ದ ಮೆಕಲಮ್ ನ್ಯೂಝಿಲ್ಯಾಂಡ್ ನ ಪ್ರಮುಖ ಆಟಗಾರನಾಗಿದ್ದರು. ಈ ಆರಂಭಿಕ ಹೊಡೆತದಿಂದ ಕಿವೀಸ್ ಮತ್ತೆ ಚೇತರಿಸಿಕೊಳ್ಳಲಿಲ್ಲ. ಅದು ಕೇವಲ 183 ರನ್ ಗೆ ಆಲೌಟಾಯಿತು. 3 ವಿಕೆಟಿಗೆ 186 ರನ್ ಗಳಿಸಿದ ಆಸ್ಟ್ರೇಲಿಯಾ 7 ವಿಕೆಟ್ ನಿಂದ ತನ್ನ ಐದನೇ ಪ್ರಶಸ್ತಿಯನ್ನು ಸುಲಭವಾಗಿ ಗೆದ್ದುಕೊಂಡಿತ್ತು.
ಮುಂದುವರಿಯುತ್ತದೆ...







