ರಾಷ್ಟ್ರೀಯ ಕ್ರೀಡಾ ನೀತಿ 2025ಕ್ಕೆ ಕೇಂದ್ರ ಸಚಿವ ಸಂಪುಟ ಅಂಗೀಕಾರ

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ | PTI
ಹೊಸದಿಲ್ಲಿ: ಭಾರತೀಯ ಕ್ರೀಡಾ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಮತ್ತು ಕ್ರೀಡೆಯ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಉದ್ದೇಶದ ರಾಷ್ಟ್ರೀಯ ಕ್ರೀಡಾ ನೀತಿ 2025ಕ್ಕೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ಪ್ರಕಟಿಸಿದರು.
2001ರ ರಾಷ್ಟ್ರೀಯ ಕ್ರೀಡಾ ನೀತಿಯ ಸ್ಥಾನದಲ್ಲಿ ಬರುವ ಹಾಲಿ ಕ್ರೀಡಾ ನೀತಿಯು, ಭಾರತವನ್ನು ಕ್ರೀಡಾ ಲೋಕದ ಜಾಗತಿಕ ಶಕ್ತಿಯನ್ನಾಗಿ ಮಾಡುವ ಮಾರ್ಗನಕ್ಷೆಯನ್ನು ಹೊಂದಿದೆ. ಅಂತರರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಮಿಂಚುವ ಭಾರತದ ಬಯಕೆಗೆ ಬಲ ತುಂಬುವುದು ಮತ್ತು 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವುದು ನೂತನ ಕ್ರೀಡಾ ನೀತಿಯ ಮುಖ್ಯಾಂಶಗಳಾಗಿವೆ.
ಕೇಂದ್ರ ಸರಕಾರದ ಮಂತ್ರಿಗಳು, ನೀತಿ ಆಯೋಗ, ರಾಜ್ಯ ಸರಕಾರಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು, ಕ್ರೀಡಾಪಟುಗಳು, ಕ್ರೀಡಾ ಕ್ಷೇತ್ರದ ಪರಿಣತರು ಮತ್ತು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ 2025ರ ಕ್ರೀಡಾ ನೀತಿಯನ್ನು ರೂಪಿಸಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಐದು ಮುಖ್ಯ ಅಂಶಗಳನ್ನು ಆಧರಿಸಿ ನೀತಿಯನ್ನು ರೂಪಿಸಲಾಗಿದೆ. ಅವುಗಳೆಂದರೆ: ಜಾಗತಿಕ ಕಣದಲ್ಲಿ ಶ್ರೇಷ್ಠ ಸಾಧನೆ, ಆರ್ಥಿಕ ಅಭಿವೃದ್ಧಿಗಾಗಿ ಕ್ರೀಡೆ, ಸಾಮಾಜಿಕ ಅಭಿವೃದ್ಧಿಗಾಗಿ ಕ್ರೀಡೆ, ಜನರ ಅಭಿಯಾನವಾಗಿ ಕ್ರೀಡೆ ಮತ್ತು ಶಿಕ್ಷಣದೊಂದಿಗೆ ಏಕೀಕರಣ.







