ಯು.ಎಸ್. ಓಪನ್: ಅಲ್ಕರಾಝ್ ಸೆಮಿಫೈನಲ್ಗೆ ಲಗ್ಗೆ

ಕಾರ್ಲೊಸ್ ಅಲ್ಕರಾಝ್ Photo- PTI
ನ್ಯೂಯಾರ್ಕ್: ಅಗ್ರ ಶ್ರೇಯಾಂಕದ ಕಾರ್ಲೊಸ್ ಅಲ್ಕರಾಝ್ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿ ಯು.ಎಸ್. ಓಪನ್ ಟೆನಿಸ್ ಟೂರ್ನಮೆಂಟ್ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಈ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಸ್ಪೇನ್ ಆಟಗಾರ ಝ್ವೆರೆವ್ ಬುಧವಾರ ನಡೆದ ಪುರುಷರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಝ್ವೆರೆವ್ರನ್ನು 6-3, 6-2, 6-4 ಸೆಟ್ಗಳ ಅಂತರದಿಂದ ಸೋಲಿಸಿದರು. ಶುಕ್ರವಾರ ನಡೆಯಲಿರುವ ಅಂತಿಮ-4ರ ಪಂದ್ಯದಲ್ಲಿ ರಶ್ಯದ ಡೇನಿಯಲ್ ಮೆಡ್ವೆಡೆವ್ ಸವಾಲನ್ನು ಎದುರಿಸಲಿದ್ದಾರೆ.
ಸೋಮವಾರ ಜನ್ನಿಕ್ ಸಿನ್ನೆರ್ ವಿರುದ್ಧ ಐದು ಸೆಟ್ಗಳ ಮ್ಯಾರಥಾನ್ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಝ್ವೆರೆವ್ 4 ಗಂಟೆ, 41 ನಿಮಿಷಗಳ ಕಾಲ ಪ್ರಸಕ್ತ ಟೂರ್ನಿಯಲ್ಲಿ ಸುದೀರ್ಘಾವಧಿಯ ಪಂದ್ಯವನ್ನು ಆಡಿ ಗಮನ ಸೆಳೆದಿದ್ದರು. 2020ರ ಯುಎಸ್ ಓಪನ್ ಫೈನಲಿಸ್ಟ್ ಝ್ವೆರೆವ್ ಅವರು ಅಲ್ಕರಾಝ್ ವಿರುದ್ಧ ವೇಗವಾಗಿ ಆಡುವಲ್ಲಿ ವಿಫಲರಾದರು.
ಕಳೆದ ವರ್ಷದ ಯು.ಎಸ್. ಓಪನ್ ನಂತರ 20ರ ಹರೆಯದ ಅಲ್ಕರಾಝ್ ಒಂದು ಸೆಮಿ ಫೈನಲ್ ಪಂದ್ಯವನ್ನು ಮಾತ್ರ ಸೋತಿದ್ದಾರೆ. ಫ್ರೆಂಚ್ ಓಪನ್ ಸೆಮಿ ಫೈನಲ್ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಅವರು ಸೋತಿದ್ದರು.
ಇದೇ ವೇಳೆ ರಶ್ಯದ ಮೆಡ್ವೆಡೆವ್ ಮತ್ತೊಂದು ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ 8ನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೆವ್ ವಿರುದ್ಧ 6-4, 6-3, 6-4 ಸೆಟ್ಗಳ ಅಂತರದಿಂದ ಜಯ ಸಾಧಿಸಿ ಅಂತಿಮ-4ರ ಹಂತ ತಲುಪಿದರು.







