ಯುಎಸ್ ಓಪನ್: ಜೊಕೊವಿಕ್ 3ನೇ ಸುತ್ತಿಗೆ
ಸ್ವಿಯಾಟೆಕ್, ಕೋಕೊ ಗೌಫ್ ಮುಂದಿನ ಸುತ್ತಿಗೆ
ನೊವಾಕ್ ಜೊಕೊವಿಕ್ Photo: twitter/@usopen
ನ್ಯೂಯಾರ್ಕ್: ತನ್ನ ಬದುಕಿನ 24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಾಗಿ ಸೆಣಸುತ್ತಿರುವ ಸರ್ಬಿಯದ ನೊವಾಕ್ ಜೊಕೊವಿಕ್ ಬುಧವಾರ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ನ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಇಲ್ಲಿನ ಆರ್ತರ್ ಆ್ಯಶ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಜೊಕೊವಿಕ್ 76ನೇ ವಿಶ್ವ ರ್ಯಾಂಕಿಂಗ್ನ ಸ್ಪೇನ್ನ ಬರ್ನಾಬ್ ಝಪಟ ಮಿರಾಲಿಸ್ರನ್ನು 6-4, 6-1, 6-1 ಸೆಟ್ಗಳಿಂದ ಅನಾಯಾಸವಾಗಿ ಸೋಲಿಸಿದರು.
ಜೊಕೊವಿಕ್ ಇನ್ನು ಮೂರನೇ ಸುತ್ತಿನಲ್ಲಿ ತನ್ನದೇ ದೇಶದ, 32ನೇ ಶ್ರೇಯಾಂಕದ ಲಸ್ಲೊ ಡಯೆರೆಯನ್ನು ಎದುರಿಸಲಿದ್ದಾರೆ. “36ನೇ ವಯಸ್ಸಿನಲ್ಲಿ, ಯುಎಸ್ ಓಪನ್ಗೆ ಕಾಲಿರಿಸಿದ 20 ವರ್ಷಗಳ ಬಳಿಕ, ಈ ಮೈದಾನದಲ್ಲಿ ನನ್ನ ಶ್ರೇಷ್ಠ ಟೆನಿಸ್ ಆಡಲು ಈಗಲೂ ನಾನು ಉತ್ಸುಕನಾಗಿದ್ದೇನೆ’’ ಎಂದು ಪಂದ್ಯದ ಬಳಿಕ ಮಾತನಾಡಿದ ಮೂರು ಬಾರಿಯ ಯುಎಸ್ ಓಪನ್ ಚಾಂಪಿಯನ್ ಜೊಕೊವಿಕ್ ಹೇಳಿದರು.
ಗ್ರೀಸ್ನ ಸ್ಟೆಫನೊಸ್ ಟ್ಸಿಟ್ಸಿಪಸ್ ಸ್ವಿಟ್ಸರ್ಲ್ಯಾಂಡ್ನ 21 ವರ್ಷದ ಡಾಮ್ನಿಕ್ ಸ್ಟ್ರಿಕರ್ ವಿರುದ್ಧ 5-7, 7-6 (7/2), 7-6 (7/5), 6-7 (6/8), 3-6 ಸೆಟ್ಗಳಿಂದ ಸೋತರು.
ಸ್ವಿಯಾಟೆಕ್- ಕೋಕೊ ಗೌಫ್ ಕ್ವಾರ್ಟರ್ಫೈನಲ್ ಮುಖಾಮುಖಿಯತ್ತ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಪರಸ್ಪರ ಮುಖಾಮುಖಿಯಾಗುವ ನಿಟ್ಟಿನಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂಬರ್ ವನ್ ಪೋಲ್ಯಾಂಡ್ನ ಇಗಾ ಸ್ವಿಯಾಟೆಕ್ ಮತ್ತು ಅಮೆರಿಕದ ಕೋಕೊ ಗೌಫ್ ಸಾಗಿದ್ದಾರೆ.
ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ, ಸ್ವಿಯಾಟೆಕ್ ಆಸ್ಟ್ರೇಲಿಯದ ಡಾರಿಯಾ ಸ್ಯಾವಿಲ್ರನ್ನು 6-3, 6-4 ನೇರ ಸೆಟ್ಗಳಿಂದ ಸೋಲಿಸಿದರು.
ಸೆರೀನಾ ವಿಲಿಯಮ್ಸ್ ಬಳಿಕ, ಸತತ ಎರಡನೇ ಬಾರಿ ಯುಎಸ್ ಓಪನ್ ಕಿರೀಟವನ್ನು ಗೆದ್ದ ಮೊದಲ ಮಹಿಳೆಯಾಗುವ ನಿಟ್ಟಿನಲ್ಲಿ ಸ್ವಿಯಾಟೆಕ್ ಮುಂದುವರಿದಿದ್ದಾರೆ. ಸೆರೀನಾ 2012-2014ರ ನಡುವೆ ಸತತ ಮೂರು ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ.
ಸ್ವಿಯಾಟೆಕ್ 3ನೇ ಸುತ್ತಿನಲ್ಲಿ ಶುಕ್ರವಾರ ಸ್ಲೊವೇನಿಯದ ಕಾಜಾ ಜುವಾನ್ರನ್ನು ಎದುರಿಸಲಿದ್ದಾರೆ.
ಬುಧವಾರ ನಡೆದ ಇನ್ನೊಂದು ಎರಡನೇ ಸುತ್ತಿನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ, 19 ವರ್ಷದ ಗೌಫ್, ರಶ್ಯದ 16 ವರ್ಷದ ಮಿರಾ ಅಂಡ್ರೀವರನ್ನು 6-3, 6-2 ಸೆಟ್ಗಳಿಂದ ಸೋಲಿಸಿದರು. ಮಿರಾ ಈ ಪಂದ್ಯಾವಳಿಯ ಅತಿ ಕಿರಿಯ ಸ್ಪರ್ಧಿಯಾಗಿದ್ದಾರೆ.
ಈ ವರ್ಷ ಈಗಾಗಲೇ ವಾಶಿಂಗ್ಟನ್ ಮತ್ತು ಸಿನ್ಸಿನಾಟಿಯಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ 6ನೇ ಶ್ರೇಯಾಂಕದ ಗೌಫ್, ಮೂರನೇ ಸುತ್ತಿನಲ್ಲಿ ಬೆಲ್ಜಿಯಮ್ನ ಎಲಿಸ್ ಮರ್ಟನ್ಸ್ರನ್ನು ಎದುರಿಸಲಿದ್ದಾರೆ.
32ನೇ ಶ್ರೇಯಾಂಕದ ಮರ್ಟನ್ಸ್, ಕಳೆದ ಬಾರಿಯ ಆಸ್ಟ್ರೇಲಿಯನ್ ಓಪನ್ ರನ್ನರ್-ಅಪ್ ಕಾಲಿನ್ಸ್ರನ್ನು 3-6, 7-6(9/7), 6-1 ಸೆಟ್ಗಳಿಂದ ಸೋಲಿಸಿದರು.
2ನೇ ಸುತ್ತಿನಲ್ಲಿ ಹೊರಬಿದ್ದ ಕ್ಯಾಸ್ಪರ್ ರೂಡ್:
ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಿಂದ ಐದನೇ ಶ್ರೇಯಾಂಕದ ನಾರ್ವೆಯ ಕ್ಯಾಸ್ಪರ್ ರೂಡ್ ಹೊರಬಿದ್ದಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ, ಕಳೆದ ವರ್ಷ ಫೈನಲ್ನಲ್ಲಿ ಆಡಿದ್ದ ರೂಡ್ರನ್ನು ಚೀನಾದ ಝಾಂಗ್ ಝಿಝೆನ್ 6-4, 5-7, 6-2, 0-6, 6-2 ಸೆಟ್ಗಳಿಂದ ಸೋಲಿಸಿದರು.
ಇದರೊಂದಿಗೆ ಝಿಝೆನ್, ಗ್ರ್ಯಾನ್ ಸ್ಲಾಮ್ ಪಂದ್ಯವೊಂದರಲ್ಲಿ ಅಗ್ರ-5 ಶ್ರೇಯಾಂಕದ ಆಟಗಾರನೊಬ್ಬನನ್ನು ಸೋಲಿಸಿದ ಮೊದಲ ಚೀನೀ ಪುರುಷ ಟೆನಿಸ್ ಆಟಗಾರನಾದರು.
ಶಾಂಘೈಯ 26 ವರ್ಷದ 67ನೇ ವಿಶ್ವ ರ್ಯಾಂಕಿಂಗ್ ಆಟಗಾರ ತನ್ನ ಜೀವಮಾನದ ಆಟವನ್ನು ಪ್ರದರ್ಶಿಸಿ ಪಂದ್ಯವನ್ನು 3 ಗಂಟೆ 19 ನಿಮಿಷಗಳಲ್ಲಿ ಗೆದ್ದರು. ಅವರು ಇನ್ನು ಮೂರನೇ ಸುತ್ತಿನಲ್ಲಿ ಶುಕ್ರವಾರ ಆಸ್ಟ್ರೇಲಿಯದ ರಿಂಕಿ ಹಿಜಿಕಟರನ್ನು ಎದುರಿಸಲಿದ್ದಾರೆ. ರಿಂಕಿ ಹಿಜಿಕಟ ಹಂಗೇರಿಯ ಮಾರ್ಟಿನ್ ಫಸ್ಕೊವಿಕ್ಸ್ರನ್ನು ಬುಧವಾರ ನೇರ ಸೆಟ್ಗಳಿಂದ ಸೋಲಿಸಿದರು.