ಯು.ಎಸ್. ಓಪನ್ ಡಬಲ್ಸ್ ಪಂದ್ಯ: ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಫೈನಲ್ಗೆ ಪ್ರವೇಶ

ರೋಹನ್ ಬೋಪಣ್ಣ , ಮ್ಯಾಥ್ಯೂ ಅಬ್ಡೆನ್ | PHOTO: twitter \ @PathakRidhima
ನ್ಯೂಯಾರ್ಕ್: ಇಂಡೋ-ಆಸೀಸ್ ಜೋಡಿ ರೋಹನ್ ಬೋಪಣ್ಣ ಹಾಗೂ ಮ್ಯಾಥ್ಯೂ ಅಬ್ಡೆನ್ ಯು.ಎಸ್. ಓಪನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಕೊಡಗಿನ ಕುವರ ವೃತ್ತಿಜೀವನದಲ್ಲಿ ಎರಡನೇ ಬಾರಿ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ನಲ್ಲಿ ಫೈನಲ್ಗೆ ತಲುಪಿದ್ದಾರೆ. 2010ರ ನಂತರ ಮೊದಲ ಬಾರಿ ಈ ಸಾಧನೆ ಮಾಡಿದರು. 43 ವರ್ಷ ವಯಸ್ಸಿನ ಬೋಪಣ್ಣ ಅವರು ಟೆನಿಸ್ ಓಪನ್ ಯುಗದಲ್ಲಿ ಗ್ರಾನ್ಸ್ಲಾಮ್ ಸ್ಪರ್ಧೆಯಲ್ಲಿ ಫೈನಲ್ ತಲುಪಿರುವ ಹಿರಿಯ ವಯಸ್ಸಿನ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ಫ್ರಾನ್ಸ್ ಜೋಡಿ ನಿಕೊಲಸ್ ಮಹುಟ್ ಹಾಗೂ ಪೈರೆ-ಹ್ಯೂಗೆಸ್ ಹೆರ್ಬರ್ಟ್ ವಿರುದ್ಧ ಮೊದಲ ಸೆಟನ್ನು ಟೈ-ಬ್ರೇಕರ್ನಲ್ಲಿ 7-6(3) ಅಂತರದಿಂದ ಗೆದ್ದುಕೊಂಡಿತು. 2ನೇ ಸೆಟ್ನಲ್ಲೂ ತಮ್ಮ ಪ್ರಾಬಲ್ಯ ಮುಂದುವರಿಸಿ 6-2 ಅಂತರದಿಂದ ಗೆದ್ದುಕೊಂಡು ಗೆಲುವಿನ ನಗೆ ಬೀರಿತು.
ಬೋಪಣ್ಣ ಹಾಗೂ ಎಬ್ಡೆನ್ ಈವರ್ಷ ಸತತ ಎರಡನೇ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದ್ದರು.





