ಯುಎಸ್ ಓಪನ್ ಟೆನಿಸ್ ಪಂದ್ಯಾವಳಿ : ಬಹುಮಾನ ಮೊತ್ತ 1033 ಕೋಟಿ ರೂ.ಗೆ ಹೆಚ್ಚಳ

Photo Credit : AP
ನ್ಯೂಯಾರ್ಕ್, ಆ. 21: ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಬಹುಮಾನ ಹಣವನ್ನು 108 ಮಿಲಿಯ ಡಾಲರ್ (ಸುಮಾರು 1033 ಕೋಟಿ ರೂಪಾಯಿ)ಗೆ ಹೆಚ್ಚಿಸಲಾಗಿದೆ ಎಂದು ಸಂಘಟಕರು ಗುರುವಾರ ಘೋಷಿಸಿದ್ದಾರೆ. ಇದು ಟೆನಿಸ್ ಪಂದ್ಯಾವಳಿಯೊಂದರ ಈಗಿನವರೆಗಿನ ಗರಿಷ್ಠ ಮೊತ್ತವಾಗಿದೆ.
‘ಫ್ಲಶಿಂಗ್ ಮೀಡೋಸ್’ನ ಪುರುಷ ಮತ್ತು ಮಹಿಳಾ ಚಾಂಪಿಯನ್ನರು ತಲಾ 5.5 ಮಿಲಿಯ ಡಾಲರ್ (ಸುಮಾರು 52 ಕೋಟಿ ರೂಪಾಯಿ) ಮೊತ್ತವನ್ನು ಪಡೆಯಲಿದ್ದಾರೆ. ಇದು ಗ್ರ್ಯಾನ್ ಸ್ಲಾಮ್ ಇತಿಹಾಸದಲ್ಲೇ ಅತಿ ಹೆಚ್ಚಿನ ಬಹುಮಾನ ಮೊತ್ತವಾಗಿದೆ ಹಾಗೂ ಕಳೆದ ವರ್ಷದ ಮೊತ್ತಕ್ಕಿಂತ 10 ಶೇಕಡ ಹೆಚ್ಚಳವಾಗಿದೆ.
ಮೊದಲ ಸುತ್ತಿನಲ್ಲಿ ಆಡಿದವರು ತಲಾ 1,40,000 ಡಾಲರ್ (ಸುಮಾರು 1.34 ಕೋಟಿ ರೂಪಾಯಿ) ಬಹುಮಾನ ಪಡೆಯಲಿದ್ದಾರೆ. ಇದು ಕಳೆದ ವರ್ಷಕ್ಕಿಂತ 27 ಶೇಕಡ ಅಧಿಕವಾಗಿದೆ.
ಬಹುಮಾನ ಮೊತ್ತವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ಆಟಗಾರರು ನಡೆಸಿರುವ ವ್ಯಾಪಕ ಪ್ರತಿಭಟನೆಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಪಂದ್ಯಾವಳಿಯಿಂದ ಬರುವ ಆದಾಯದಿಂದ ಹೆಚ್ಚಿನ ಮೊತ್ತವನ್ನು ಬಹುಮಾನಕ್ಕೆ ನೀಡಬೇಕು ಎಂಬುದಾಗಿ ಆಟಗಾರರು ಬೇಡಿಕೆ ಇಟ್ಟಿದ್ದರು.
‘‘ಯುಎಸ್ ಓಪನ್ ಸಂಘಟಕರ ಈ ನಿರ್ಧಾರವು, ಕಳೆದ 18 ತಿಂಗಳುಗಳಿಂದ ಆಟಗಾರರು ಮತ್ತು ಯುಎಸ್ ಓಪನ್ ನಡುವೆ ನಡೆಯುತ್ತಿರುವ ಮಾತುಕತೆಗಳಲ್ಲಿ ಸಂಭವಿಸಿದ ಮಹತ್ವದ ಮುನ್ನಡೆಯಾಗಿದೆ’’ ಎಂದು ಅಗ್ರ ಆಟಗಾರರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.






