US Open | ಸೋಲಿನ ಭೀತಿಯಿಂದ ಪಾರಾದ ಝ್ವೆರೆವ್

ಅಲೆಕ್ಸಾಂಡರ್ ಝ್ವೆರೆವ್ | Photo Credit : AP
ನ್ಯೂಯಾರ್ಕ್, ಸೆ. 2: ಅಗ್ರ ಶ್ರೇಯಾಂಕದ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲಿನ ಭೀತಿಯಿಂದ ಪಾರಾಗಿ ರೋಚಕ ಜಯ ಸಾಧಿಸಿದರು.
ಬುಧವಾರ ನಡೆದಿದ್ದ ಪಂದ್ಯದಲ್ಲಿ ಇಟಲಿಯ ಲೊರೆಂಝೊ ಸೊನೆಗೊ ವಿರುದ್ಧ ಜರ್ಮನಿ ಆಟಗಾರ ಝ್ವೆರೆವ್ 6-4, 3-6, 6-7(7), 7-5, 6-4 ಸೆಟ್ಗಳ ಅಂತರದಿಂದ ಜಯಶಾಲಿಯಾದರು.
ಜೂನ್ ನಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಕಿರೀಟ ಧರಿಸಿ ಮಿಂಚಿದ್ದ ಝ್ವೆರೆವ್, ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಅನುಪಸ್ಥಿತಿ ಹಾಗೂ ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಗಾಯದ ಸಮಸ್ಯೆಯಿಂದ ವಾಪಸಾಗಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಝ್ವೆರೆವ್ ಮೊದಲ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡರು. ವಿಶ್ವದ ನಂ.89ನೇ ಆಟಗಾರ ಸೊನೆಗೊ ಎರಡನೇ ಸೆಟ್ಟನ್ನು 6-3 ಅಂತರದಿಂದ ಗೆದ್ದುಕೊಂಡರು. ಮೂರನೇ ಸೆಟ್ಟನ್ನು ಟೈ ಬ್ರೇಕರ್ನಲ್ಲಿ 7-6(7) ಅಂತರದಿಂದ ಗೆದ್ದಿರುವ ಸೊನೆಗೊ 2-1 ಮುನ್ನಡೆ ಸಾಧಿಸಿ ಝ್ವೆರೆವ್ ಗೆ ಸೋಲಿನ ಭೀತಿ ಹುಟ್ಟಿಸಿದ್ದರು.
ನಾಲ್ಕನೇ ಹಾಗೂ ಐದನೇ ಸೆಟ್ಗಳನ್ನು 7-5 ಹಾಗೂ 6-4 ಅಂತರದಿಂದ ಗೆದ್ದುಕೊಂಡಿರುವ ಝ್ವೆರೆವ್ ಮೊದಲ ಸುತ್ತಿನ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. 2003ರ ನಂತರ ಗ್ರ್ಯಾನ್ಸ್ಲಾಮ್ನ ಮೊದಲ ಸುತ್ತಿನಲ್ಲಿ ಸೋತ ಮೊದಲ ಅಗ್ರ ಶ್ರೇಯಾಂಕದ ಆಟಗಾರನಾಗುವ ಅಪಾಯದಿಂದ ಪಾರಾದರು. 2003ರಲ್ಲಿ ವಿಂಬಲ್ಡನ್ ನಲ್ಲಿ ಹೆವಿಟ್ ಮೊದಲ ಸುತ್ತಿನಲ್ಲಿ ಸೋತಿದ್ದರು.
ಝ್ವೆರೆವ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್ನ ಕ್ವೆಂಟಿನ್ ಹಾಲಿಸ್ರನ್ನು ಎದುರಿಸಲಿದ್ದಾರೆ.
►ಮೊನ್ಫಿಲ್ಸ್, ಕೊಬೊಲ್ಲಿ, ಟೇಲರ್ ಫ್ರಿಟ್ಝ್ ಶುಭಾರಂಭ
ಮೊನ್ಫಿಲ್ಸ್, ಫ್ಲಾವಿಯೊ ಕೊಬೊಲ್ಲಿ ಹಾಗೂ ಟೇಲರ್ ಫ್ರಿಟ್ಝ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಳೆ ಬಾಧಿತ ಮೊದಲ ಸುತ್ತಿನ ಪಂದ್ಯದಲ್ಲಿ ಶುಭಾರಂಭ ಮಾಡಿದ್ದಾರೆ.
ತನ್ನ 40ನೇ ಹುಟ್ಟುಹಬ್ಬ ಆಚರಿಸಿದ ಫ್ರಾನ್ಸ್ನ ಶೋಮ್ಯಾನ್ ಮೊನ್ಫಿಲ್ಸ್, ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅಡಾಲ್ಫೊ ಡೇನಿಯಲ್ರನ್ನು 2-6, 6-1, 6-2, 6-0 ಸೆಟ್ಗಳ ಅಂತರದಿಂದ ಮಣಿಸಿ ಎರಡನೇ ಸುತ್ತಿಗೇರಿದ್ದಾರೆ.
ಮೊನ್ಫಿಲ್ಸ್ ಯುಎಸ್ ಓಪನ್ ನ ಪ್ರಮುಖ ಸಿಂಗಲ್ಸ್ ಪಂದ್ಯವನ್ನು ಗೆದ್ದ ಹಿರಿಯ ಆಟಗಾರನಾಗಿದ್ದಾರೆ. 1992ರಲ್ಲಿ ಜಿಮ್ಮಿ ಕೊನೊರ್ಸ್ ತಮ್ಮ 40ನೇ ಹುಟ್ಟುಹಬ್ಬದಂದು ಗೆಲುವು ದಾಖಲಿಸಿದ್ದರು.
ಫ್ರೆಂಚ್ ಓಪನ್ ನ ರನ್ನರ್ ಅಪ್ ಕೊಬೊಲ್ಲಿ ಮೊದಲೆರಡು ಸೆಟ್ಗಳ ಸೋಲಿನಿಂದ ಚೇತರಿಸಿಕೊಂಡು ಅರ್ಜೆಂಟೀನಾದ ಫ್ರಾನ್ಸಿಸ್ಕೊ ಕೊಮೆಸಾನಾರನ್ನು 3-6, 2-6, 6-3, 6-4, 6-4 ಸೆಟ್ಗಳಿಂದ ಮಣಿಸಿದರು.
ಅಮೆರಿಕದ ಆಟಗಾರ ಟೇಲರ್ ಫ್ರಿಟ್ಝ್ ಅವರು ತಮ್ಮದೇ ದೇಶದ ಡಾರ್ವಿನ್ ಬ್ಲಾಂಚ್ರನ್ನು 6-3, 6-2, 6-4 ಸೆಟ್ಗಳಿಂದ ಮಣಿಸಿ ದ್ವಿತೀಯ ಸುತ್ತಿಗೆ ತಲುಪಿದರು.
►ರಿಬಾಕಿನಾ, ಗೌಫ್, ಕೀಸ್, ಆಂಡ್ರೀವಾ ದ್ವಿತೀಯ ಸುತ್ತಿಗೆ ಲಗ್ಗೆ
ವಿಶ್ವದ ನಂ.2ನೇ ಆಟಗಾರ್ತಿ ಎಲೆನಾ ರಿಬಾಕಿನಾ, ಮಾಜಿ ಚಾಂಪಿಯನ್ ಕೊಕೊ ಗೌಫ್, ಮ್ಯಾಡಿಸನ್ ಕೀಸ್ ಹಾಗೂ ಫ್ರೆಂಚ್ ಓಪನ್ ಚಾಂಪಿಯನ್ ಮಿರ್ರಾ ಆಂಡ್ರೀವಾ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ತಲುಪಿದ್ದಾರೆ.
ಮೂರನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಹಾಗೂ ವಿಶ್ವದ ನಂ.1 ರ್ಯಾಂಕಿಂಗ್ ಮೇಲೆ ಕಣ್ಣಿಟ್ಟಿರುವ ರಿಬಾಕಿನಾ, ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಫ್ರೊಡಿನ್ರನ್ನು 6-3, 6-2 ಅಂತರದಿಂದ ಮಣಿಸಿದರು.
ಗೌಫ್ ತುರ್ಕಿಯದ ಝೆನೆಪ್ ಸೊನ್ಮೆಝ್ರನ್ನು 6-3, 6-4 ಅಂತರದಿಂದ ಸುಲಭವಾಗಿ ಸೋಲಿಸಿದರು.
ರಿಬಾಕಿನಾ, 4ನೇ ರ್ಯಾಂಕಿನ ಗೌಫ್ ಹಾಗೂ 3ನೇ ರ್ಯಾಂಕಿನ ಜೆಸಿಕಾ ಪೆಗುಲಾಗೆ ನ್ಯೂಯಾರ್ಕ್ನಲ್ಲಿ ಆರ್ಯನ ಸಬಲೆಂಕಾರನ್ನು ಹಿಂದಿಕ್ಕಿ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರುವ ಅಪೂರ್ವ ಅವಕಾಶವಿದೆ.
ಮಹಿಳೆಯರ ಫ್ರೆಂಚ್ ಓಪನ್ ಚಾಂಪಿಯನ್ ಆಂಡ್ರೀವಾ ಇಂಡೋನೇಷ್ಯಾದ 36ನೇ ರ್ಯಾಂಕಿನ ಜಾನಿಸ್ ಜೆನ್ರನ್ನು 6-2, 6-2 ಸೆಟ್ಗಳ ಅಂತರದಿಂದ ಮಣಿಸಿದರು. ಐದನೇ ಶ್ರೇಯಾಂಕದ ಆಂಡ್ರೀವಾ ಪ್ಯಾರಿಸ್ನಲ್ಲಿ ತನ್ನ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.
ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಸ್ ರಷ್ಯಾದ ಯುವ ಆಟಗಾರ್ತಿ ಅಲಿನಾ ಕೊರ್ನೀವಾ ಅವರನ್ನು 7-5, 6-4 ಸೆಟ್ಗಳ ಅಂತರದಿಂದ ಸದೆಬಡಿದರು. ಮುಂದಿನ ಸುತ್ತಿನಲ್ಲಿ ಝೆಕ್ನ ಲೂಸಿ ಹಾವ್ಲಿಕೋವಾ ಅಥವಾ ಹಂಗೆರಿಯದ ಅನ್ನಾ ಬೊಂಡರ್ರನ್ನು ಎದುರಿಸಲಿದ್ದಾರೆ.






