FIFA ವಿಶ್ವಕಪ್ : ಅಮೆರಿಕ ತಂಡಕ್ಕೆ 4-1 ಅಂತರದ ಭರ್ಜರಿ ಗೆಲುವು

Photo credit: X/@FIFAWorldCup
ಲಾಸ್ ಏಂಜಲೀಸ್: ಫೋಲರಿನ್ ಬಾಲೋಗುನ್ ಅವರ ಎರಡು ಗೋಲುಗಳ ನೆರವಿನಿಂದ ಮೌರಿಪಿಸಿಯೋ ಪೊಚೆಟ್ಟಿನೊ ನಾಯಕತ್ವದ ಅಮೆರಿಕ ತಂಡ ಪೆರುಗ್ವೆ ವಿರುದ್ಧ 4-1 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸುವ ಶುಭಾರಂಭ ಮಾಡಿದೆ.
ಈ ಮೂಲಕ ಅಮೆರಿಕ ತಂಡ ಡಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯದ ಆರಂಭದಲ್ಲಿಯೇ ಪೆರುಗ್ವೆ ಆಕ್ರಮಣಕಾರಿ ಆಟಕ್ಕಿಳಿಯಿತು. ಆದರೆ 7ನೇ ನಿಮಿಷದಲ್ಲಿ ವೆಸ್ಟನ್ ಮೆಕೆನ್ನಿ ಅವರ ಪಾಸ್ ಅನ್ನು ತಡೆಯುವ ಭರದಲ್ಲಿ ಪೆರುಗ್ವೆಯ ಡಾಮಿಯನ್ ಬೊಬಾಡಿಲ್ಲಾ ಆಕಸ್ಮಿಕವಾಗಿ ಚೆಂಡನ್ನು ತಮ್ಮದೇ ತಂಡದ ಗೋಲ್ ಪೋಸ್ಟ್ಗೆಹೊಡೆದು, ಅಮೆರಿಕ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು.
ನಂತರ ಅಮೆರಿಕ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿತು. ಬಾಲೋಗುನ್ 31 ನಿಮಿಷ ದಲ್ಲಿ ತಂಡಕ್ಕೆ 2ನೇ ಗೋಲು ಗಳಿಸಿದರು. ಮೊದಲಾರ್ಧದ ಇಂಜುರಿ ಟೈಮ್ನಲ್ಲಿ (45+5) ಮಲಿಕ್ ಟಿಲ್ಮನ್ ನೀಡಿದ ಪಾಸ್ ಅನ್ನು ಅದ್ಭುತವಾಗಿ ಗೋಲಾಗಿ ಪರಿವರ್ತಿಸುವ ಮೂಲಕ ಬಾಲೋಗುನ್ ತಮ್ಮ ಎರಡನೇ ಗೋಲು ಮತ್ತು ತಂಡಕ್ಕೆ 3ನೇ ಗೋಲು ಗಳಿಸಿದರು.
ದ್ವಿತೀಯಾರ್ಧದಲ್ಲಿ ಹೆಚ್ಚು ಒತ್ತಡದಲ್ಲಿದ್ದ ಪೆರುಗ್ವೆಗೆ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ. ಪೆರುಗ್ವೆ ತಂಡವು ಬೊಬಡಿಲ್ಲಾ ಬದಲಿಗೆ ಆಕ್ರಮಣಕಾರಿ ಮಿಡ್ಫೀಲ್ಡರ್ ಮೌರಿಸಿಯೊ ಅವರನ್ನು ಸೇರಿಸಿಕೊಂಡು ಪಂದ್ಯಕ್ಕೆ ಮರಳಲು ಪ್ರಯತ್ನ ನಡೆಸಿತು . 73ನೇ ನಿಮಿಷದಲ್ಲಿ ಜೂಲಿಯೊ ಎನ್ಸಿಸೊ ನೀಡಿದ ಸೂಕ್ಷ್ಮ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದ ಮೌರಿಪಿಸಿಯೋ ತಂಡಕ್ಕೆ ವೇಗ ನೀಡುವ ಪ್ರಯತ್ನ ಮಾಡಿದರು. ಪಂದ್ಯದ ಅಂತಿಮ ಕ್ಷಣಗಳಲ್ಲಿ ಜಿಯೋ ರೇನಾ ದೂರದಿಂದ ಗಳಿಸಿದ ಅದ್ಭುತ ಗೋಲು ಅಮೆರಿಕದ ಗೆಲುವನ್ನು ಭದ್ರಪಡಿಸಿತು.
ಈ ಪಂದ್ಯದಲ್ಲಿ ಪೆರುಗ್ವೆ 5 ಹಳದಿ ಕಾರ್ಡ್ಗಳು ಮತ್ತು ಅಮೆರಿಕ 1 ಹಳದಿ ಕಾರ್ಡ್ ಪಡೆಯಿತು .
ಡಿ ಗುಂಪಿನಲ್ಲಿ ಅಮೆರಿಕ, ಟರ್ಕಿ , ಆಸ್ಟ್ರೇಲಿಯಾ ಮತ್ತು ಪೆರುಗ್ವೆ ತಂಡಗಳಿವೆ.
ಮುಂದಿನ ಪಂದ್ಯದಲ್ಲಿ ಅಮೆರಿಕ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ.






