2ನೇ ಆ್ಯಶಸ್ ಟೆಸ್ಟ್ಗೆ ಮುನ್ನ ಪೂರ್ಣ ದೈಹಿಕ ಕ್ಷಮತೆಗೆ ಮರಳದ ಉಸ್ಮಾನ್ ಖ್ವಾಜಾ

ಉಸ್ಮಾನ್ ಖ್ವಾಜಾ | Photo Credit : PTI
ಬ್ರಿಸ್ಬೇನ್, ಡಿ. 1: ಆಸ್ಟ್ರೇಲಿಯ ಮತ್ತು ಪ್ರವಾಸಿ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಆ್ಯಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಗುರುವಾರ ಬ್ರಿಸ್ಬೇನ್ನ ಗಾಬಾ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಳ್ಳಲಿದೆ. ಪಂದ್ಯಕ್ಕೆ ಇನ್ನು ಮೂರೇ ದಿನಗಳು ಇರುವಂತೆಯೇ, ಆಸ್ಟ್ರೇಲಿಯ ತಂಡದ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಸಂಪೂರ್ಣ ದೈಹಿಕ ಕ್ಷಮತೆಯನ್ನು ಪಡೆದುಕೊಂಡಿಲ್ಲ.
ಕಳೆದ ವಾರ ಅವರ ಬೆನ್ನಿಗೆ ಗಾಯವಾಗಿತ್ತು. ಅದರ ಬಳಿಕ ಮೊದಲ ಬಾರಿಗೆ ಅವರನ್ನು ಸೋಮವಾರ ದೈಹಿಕ ಕ್ಷಮತೆ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯರು ಅವರನ್ನು ನೆಟ್ನಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿದರು ಎಂದು ವರದಿಯೊಂದು ತಿಳಿಸಿದೆ.
ಮೊದಲ ಆ್ಯಶಸ್ ಟೆಸ್ಟ್ ಪಂದ್ಯದ ವೇಳೆ ಉಸ್ಮಾನ್ ಖ್ವಾಜಾ ಬೆನ್ನಿನ ನೋವಿಗೆ ಒಳಗಾಗಿದ್ದರು. ಹಾಗಾಗಿ, ಇಂಗ್ಲೆಂಡ್ನ ಮೊದಲ ಇನಿಂಗ್ಸ್ನ ಉತ್ತರಾರ್ಧದಲ್ಲಿ ಅವರು ಮೈದಾನದಿಂದ ಹೊರನಡೆದರು. ಬಳಿಕ, ಆಸ್ಟ್ರೇಲಿಯದ ಎರಡನೇ ಇನಿಂಗ್ಸ್ನಲ್ಲೂ ಅವರಿಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.
ಅವರು ಸೋಮವಾರ ಕೆಂಪು ಚೆಂಡಿನಲ್ಲಿ 30 ನಿಮಿಷಗಳ ನೆಟ್ ಅಭ್ಯಾಸ ನಡೆಸಿದರು. ಗಾಬಾ ಔಟ್ಫೀಲ್ಡ್ನಲ್ಲಿ ಲಘು ಓಟದ ಬಳಿಕ ಖ್ವಾಜಾ ಕೆಲವು ಸಲ ಅಸ್ವಸ್ಥಗೊಂಡಂತೆ ಕಂಡುಬಂದರು. ಅವರು ಕೇವಲ ಸಹಾಯಕ ಕೋಚ್ ಮೈಕಲ್ ಡಿ ವೆನುಟೊ ಎಸೆದ ಚೆಂಡುಗಳನ್ನು ಮಾತ್ರ ಎದುರಿಸಿದರು.
ಮಂಗಳವಾರ ಮತ್ತು ಬುಧವಾರ ಅವರ ಅಭ್ಯಾಸವನ್ನು ವೀಕ್ಷಿಸಿದ ಬಳಿಕ ಎರಡನೇ ಟೆಸ್ಟ್ಗೆ ಅವರ ಲಭ್ಯತೆಯನ್ನು ನಿರ್ಧರಿಸಲಾಗುವುದು.







