ವೈಶಾಲಿ ಕೈಕುಲುಕಲು ನಿರಾಕರಿಸಿದ ಉಝ್ಬೆಕಿಸ್ತಾನದ ನೊಡಿರ್ಬೇಕ್ ಯಾಕೂಬೋವ್!

ನೊಡಿರ್ಬೇಕ್ ಯಾಕೂಬೋವ್, ಆರ್. ವೈಶಾಲಿ | PC : X \ @InsideSportIND
ವಿಜ್ಕ್ ಆನ್ ಜೀ (ನೆದರ್ಲ್ಯಾಂಡ್ಸ್): ನೆದರ್ಲ್ಯಾಂಡ್ಸ್ನ ವಿಜ್ಕ್ ಆನ್ ಜೀ ಎಂಬಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಪಂದ್ಯಾವಳಿಯಲ್ಲಿ ರವಿವಾರ ಪಂದ್ಯವೊಂದರ ಆರಂಭದಲ್ಲಿ ಉಝ್ಬೆಕಿಸ್ತಾನದ ಗ್ರಾಂಡ್ಮಾಸ್ಟರ್ ನೊಡಿರ್ಬೇಕ್ ಯಾಕೂಬೋವ್ ಭಾರತದ ಗ್ರಾಂಡ್ಮಾಸ್ಟರ್ ಆರ್. ವೈಶಾಲಿಯ ಕೈಕುಲುಕಲು ನಿರಾಕರಿಸಿರುವ ಘಟನೆಯೊಂದು ನಡೆದಿದೆ.
ಬಳಿಕ, ಇದು ವಿವಾದವಾಗುತ್ತಿರುವಂತೆಯೇ ಅವರು ಕ್ಷಮೆ ಕೋರಿದ್ದಾರೆ. ಕೈಕುಲುಕಲು ನಿರಾಕರಿಸಿರುವುದು ಅಗೌರವವಲ್ಲ ಎಂದು ಹೇಳಿರುವ ಅವರು, ‘‘ಧಾರ್ಮಿಕ ಕಾರಣಗಳಿಗಾಗಿ’’ ತನಗೆ ಕೈಕುಲುಕಲು ಸಾಧ್ಯವಾಗಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಯೂಕೂಬೋವ್ ವಿರುದ್ಧದ ನಾಲ್ಕನೇ ಸುತ್ತಿನ ಪಂದ್ಯಕ್ಕೆ ಮುನ್ನ, ಎದುರಾಳಿಯ ಕೈಕುಲುಕುವ ಉದ್ದೇಶದಿಂದ ವೈಶಾಲಿ ತನ್ನ ಕೈಯನ್ನು ಮುಂದಕ್ಕೆ ಚಾಚಿದರು. ಆದರೆ ಯಾಕೂಬೋವ್ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಕುಳಿತರು. ಆ ಪಂದ್ಯದಲ್ಲಿ ವೈಶಾಲಿ ವಿಜಯಶಾಲಿಯಾದರು.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ, ಯಾಕೂಬೋವ್ ತನ್ನ ‘ಎಕ್ಸ್’ ಖಾತೆಯಲ್ಲಿ ಸುದೀರ್ಘ ಪ್ರತಿಕ್ರಿಯೆ ನೀಡಿದ್ದಾರೆ. ತನಗೆ ವೈಶಾಲಿ ಮತ್ತು ಅವರ ತಮ್ಮ ಆರ್. ಪ್ರಜ್ಞಾನಂದರ ಬಗ್ಗೆ ಗೌರವವಿದೆ ಎಂದು ಹೇಳಿದ್ದಾರೆ. ‘‘ವೈಶಾಲಿ ಜೊತೆಗಿನ ಪಂದ್ಯದ ಸಂದರ್ಭದಲ್ಲಿ ನಡೆದಿರುವ ಪರಿಸ್ಥಿತಿಗೆ ವಿವರಣೆ ನೀಡಲು ನಾನು ಬಯಸುತ್ತೇನೆ. ನನಗೆ ಮಹಿಳೆಯರು ಮತ್ತು ಭಾರತೀಯ ಚೆಸ್ ಆಟಗಾರರ ಬಗ್ಗೆ ಅಪಾರ ಗೌರವವಿದೆ. ಆದರೆ, ಧಾರ್ಮಿಕ ಕಾರಣಗಳಿಗಾಗಿ ನಾನು ಇತರ ಮಹಿಳೆಯರನ್ನು ಮುಟ್ಟುವುದಿಲ್ಲ’’ ಎಂದು ಅವರು ಹೇಳಿದ್ದಾರೆ.







