ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ವಡೋದರ ಅಭಿಮಾನಿಗಳ ಕಾತರ

photo credit: File Photo
ವಡೋದರ, ಜ.9: ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಹಬ್ಗಳಲ್ಲಿ ಒಂದಾಗಿರುವ ವಡೋದರದಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರು 15 ವರ್ಷಗಳ ಹಿಂದೆ ಆಡಿದ್ದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಒಂದು ನೋಟವನ್ನು ಸೆರೆಹಿಡಿಯಲು ತಂಡ ವಾಸ್ತವ್ಯ ಹೂಡಿರುವ ಹೊಟೇಲ್ ಹೊರಗಡೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ತಾಳ್ಮೆಯಿಂದ ಕಾದು ಕುಳಿತಿದ್ದಾರೆ.
ಭಾರತೀಯ ತಂಡ ತಂಗಿರುವ ಹೊಟೇಲ್ನ ಹೊರಗಿನ ರಸ್ತೆ ಪದೇಪದೇ ಸಂಚಾರ ದಟ್ಟಣೆಗೆ ಸಾಕ್ಷಿಯಾಗುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ಹಾಗೂ ರೋಹಿತ್ ಅವರ ಫೋಟೊಗಳನ್ನು ಕ್ಲಿಕ್ಕಿಸುವ ಕಾತರದಲ್ಲಿದ್ದಾರೆ.
ಕೊಹ್ಲಿ ಹಾಗೂ ರೋಹಿತ್ ತಿಂಗಳ ಹಿಂದೆಯಷ್ಟೇ ಸ್ವದೇಶದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಎಲ್ಲರ ಗಮನ ಟಿ–20 ವಿಶ್ವಕಪ್ ನತ್ತ ಹರಿದಿರುವುದರಿಂದ ನ್ಯೂಝಿಲ್ಯಾಂಡ್ ಸರಣಿ ರೋಹಿತ್ ಹಾಗೂ ಕೊಹ್ಲಿ ಪಾಲಿಗೆ ಅತ್ಯುತ್ತಮ ಅವಕಾಶವಾಗಿದೆ.
ರವಿವಾರ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮೊದಲು ಈ ಇಬ್ಬರು ಆಟಗಾರರು ಬಿರುಸಿನ ಅಭ್ಯಾಸ ನಡೆಸಿದ್ದಾರೆ. ವಿಜಯ್ ಹಝಾರೆ ಟ್ರೋಫಿಯಲ್ಲಿ ಕ್ರಮವಾಗಿ ದಿಲ್ಲಿ ಹಾಗೂ ಮುಂಬೈ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ರಿಷಭ್ ಪಂತ್ ಹಾಗೂ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಶುಕ್ರವಾರ ಸಂಜೆ ವಡೋದರಕ್ಕೆ ಆಗಮಿಸಿದ್ದು, ಶನಿವಾರದಿಂದ ತರಬೇತಿ ಆರಂಭಿಸುವ ನಿರೀಕ್ಷೆಯಿದೆ.







