ಶ್ರೀಲಂಕಾ ತ್ರಿಕೋನ ಸರಣಿಗೆ ಭಾರತ–ಎ ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ಸ್ಥಾನ

ವೈಭವ್ ಸೂರ್ಯವಂಶಿ | Photo Credit : PTI
ಹೊಸದಿಲ್ಲಿ: ಶ್ರೀಲಂಕಾದಲ್ಲಿ ಜೂನ್ ನಲ್ಲಿ ನಡೆಯಲಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಗೆ ಭಾರತ–ಎ ತಂಡವನ್ನು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ. ಐಪಿಎಲ್ನಲ್ಲಿ ಮಿಂಚಿನ ಪ್ರದರ್ಶನ ನೀಡಿರುವ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಜೂನ್ 9ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿ ಭಾರತ–ಎ, ಶ್ರೀಲಂಕಾ–ಎ ಹಾಗೂ ಅಫ್ಘಾನಿಸ್ತಾನ–ಎ ತಂಡಗಳು ಸ್ಪರ್ಧಿಸಲಿವೆ. ಸರಣಿಯು ಜೂನ್ 21ರವರೆಗೆ ನಡೆಯಲಿದೆ. ಐಪಿಎಲ್ ಋತು ಮುಕ್ತಾಯಗೊಂಡ ತಕ್ಷಣವೇ ಈ ಸರಣಿ ಆರಂಭವಾಗಲಿದೆ.
ಈ ಬಾರಿಯ ಐಪಿಎಲ್ನಲ್ಲಿ 11 ಪಂದ್ಯಗಳಲ್ಲಿ ಆಡಿರುವ ವೈಭವ್ ಸೂರ್ಯವಂಶಿ 440 ರನ್ಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಅವರ ಖಾತೆಯಲ್ಲಿ ಎರಡು ಶತಕ ಹಾಗೂ ಮೂರು ಅರ್ಧಶತಕಗಳಿವೆ.
ತ್ರಿಕೋನ ಸರಣಿ ಬಳಿಕ ಭಾರತ–ಎ ತಂಡವು ಶ್ರೀಲಂಕಾ–ಎ ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯಗಳ ಸರಣಿಯನ್ನೂ ಆಡಲಿದೆ. ಆ ಸರಣಿಗೆ ಪ್ರತ್ಯೇಕವಾಗಿ ತಂಡ ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಏಕದಿನ ಸರಣಿಯ ಪಂದ್ಯಗಳು ದಂಬುಲಾದಲ್ಲಿ ನಡೆಯಲಿದ್ದು, ನಾಲ್ಕು ದಿನಗಳ ಪಂದ್ಯಗಳ ಸರಣಿ ಗಾಲೆಯಲ್ಲಿ ಆಯೋಜನೆಯಾಗಿದೆ. ತಿಲಕ್ ವರ್ಮ ತಂಡದ ನಾಯಕರಾಗಿ ಆಯ್ಕೆಯಾಗಿದ್ದು, ರಿಯಾನ್ ಪರಾಗ್ ಉಪನಾಯಕನಾಗಿದ್ದಾರೆ.
ಭಾರತ–ಎ ತಂಡ: ತಿಲಕ್ ವರ್ಮ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ಉಪ ನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಹರ್ಷ್ ದುಬೆ, ಸೂರ್ಯಾಂಶ್ ಶೆಡ್ಗೆ, ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಜ್ ನಿಗಮ್, ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅನ್ಷುಲ್ ಕಾಂಬೋಜ್ ಹಾಗೂ ಅರ್ಷದ್ ಖಾನ್.






