ಕ್ರಿಸ್ ಗೇಲ್ ಸಿಕ್ಸರ್ ದಾಖಲೆ ಮುರಿಯುವ ಹಾದಿಯಲ್ಲಿ ರಾಜಸ್ಥಾನದ ಬ್ಯಾಟರ್ : ಈ ವರ್ಷದ ಐಪಿಎಲ್ನಲ್ಲಿ ಪ್ರಕಾಶಿಸುತ್ತಿರುವ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ | Photo Credit : PTI
ಹೊಸದಿಲ್ಲಿ, ಮೇ 26: ಈ ವರ್ಷದ ಐಪಿಎಲ್ ಟಿ-20 ಟೂರ್ನಿಗಿಂತ ಮೊದಲು ಒಂದೇ ಋತುವಿನಲ್ಲಿ ಯಾವೊಬ್ಬ ಬ್ಯಾಟರ್ 550 ರನ್ ಹಾಗೂ ಅದಕ್ಕಿಂತ ಹೆಚ್ಚು ಸ್ಕೋರನ್ನು 200ಕ್ಕೂ ಅಧಿಕ ಸ್ಟ್ರೈಕ್ರೇಟ್ನಲ್ಲಿ ಗಳಿಸಿಲ್ಲ. 15ರ ವಯಸ್ಸಿನ ವೈಭವ್ ಸೂರ್ಯವಂಶಿ ಮೊದಲ ಬಾರಿ ಈ ಸಾಧನೆ ಮಾಡುವ ಮೂಲಕ ಐಪಿಎಲ್ನಲ್ಲಿ ಪ್ರಕಾಶಿಸುತ್ತಿದ್ದಾರೆ.
ಸೂರ್ಯವಂಶಿ ಕಳೆದ ವರ್ಷ ತನ್ನ ಸಾಮರ್ಥ್ಯದ ಝಲಕ್ಅನ್ನು ತೋರಿಸಿದ್ದರು. ಆಗ ಅವರು ರಾಜಸ್ಥಾನ ರಾಯಲ್ಸ್ ಪರ ಆಡಿರುವ ಏಳು ಇನಿಂಗ್ಸ್ಗಳಲ್ಲಿ 206 ಸ್ಟ್ರೈಕ್ರೇಟ್ನಲ್ಲಿ ಒಟ್ಟು 252 ರನ್ ಗಳಿಸಿದ್ದರು. ಈ ವರ್ಷ ಮತ್ತೊಂದು ಮಟ್ಟ ತಲುಪಿದ್ದಾರೆ. ಸೂರ್ಯವಂಶಿ ಅವರು ಅಸಾಮಾನ್ಯ ಸ್ಟ್ರೈಕ್ರೇಟ್ನಲ್ಲಿ ರನ್ ಹೊಳೆ ಹರಿಸಿ ಅಪರೂಪದ ಸಾಧನೆ ಮಾಡಿದ್ದಾರೆ.
ಸೂರ್ಯವಂಶಿ ಈ ವರ್ಷ 232.27ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಟಿ-20 ಟೂರ್ನಮೆಂಟ್ನಲ್ಲಿ 500 ರನ್ ಗಳಿಸಿದ ಬ್ಯಾಟರ್ಗಳ ಪೈಕಿ ಸುಮಾರು ಶೇ.13ರಷ್ಟು ಉತ್ತಮ ಸಾಧನೆ ಇದಾಗಿದೆ. ಈ ವರ್ಷದ ಐಪಿಎಲ್ನಲ್ಲಿ ಅಭಿಷೇಕ್ ಶರ್ಮಾ ಕೂಡ 500ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ.
ಸೂರ್ಯವಂಶಿ ಅವರ ಸಿಕ್ಸರ್ ಸಿಡಿಸುವ ಸಾಮರ್ಥ್ಯವು ಅತ್ಯಮೋಘವಾಗಿದ್ದು, ಗರಿಷ್ಠ ಸಿಕ್ಸರ್ ಸಿಡಿಸಿ ತನಗಿಂತ ಹೆಚ್ಚು ವಯಸ್ಸಿನ ಹಳೆಯ ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ.
ಸೂರ್ಯವಂಶಿ 2026ರ ಐಪಿಎಲ್ನಲ್ಲಿ 14 ಪಂದ್ಯಗಳಲ್ಲಿ ಒಟ್ಟು 53 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಒಂದೇ ಋತುವಿನಲ್ಲಿ ಐಪಿಎಲ್ ಅಥವಾ ಯಾವುದೇ ಪಂದ್ಯಾವಳಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆಯು ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ ಹೆಸರಲ್ಲಿದೆ. ಗೇಲ್ 2012ರ ಐಪಿಎಲ್ನಲ್ಲಿ ಒಟ್ಟು 59 ಸಿಕ್ಸರ್ಗಳನ್ನು ಸಿಡಿಸಿದ್ದರು.
ರಾಜಸ್ಥಾನ ರಾಯಲ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯವನ್ನಾಡಲಿದ್ದು, ಈ ಪಂದ್ಯದಲ್ಲಿ ಸೂರ್ಯವಂಶಿಗೆ ಗೇಲ್ ದಾಖಲೆಯನ್ನು ಮುರಿಯುವ ಅವಕಾಶವಿದೆ. ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡ ಆಡಿದರೆ ಸೂರ್ಯವಂಶಿಗೆ ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧನೆ ಮಾಡಬಹುದು.
ಸೂರ್ಯವಂಶಿಗಿಂತ ಮೊದಲು ಕೇವಲ ಇಬ್ಬರು ಬ್ಯಾಟರ್ಗಳು ಟಿ-20 ಪಂದ್ಯಾವಳಿಯಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಗೇಲ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. 2012ರ ಐಪಿಎಲ್ನಲ್ಲಿ 59 ಸಿಕ್ಸರ್ ಸಿಡಿಸಿದ ನಂತರ 2013ರ ಐಪಿಎಲ್ನಲ್ಲಿ 51 ಸಿಕ್ಸರ್ಗಳನ್ನು ಸಿಡಿಸಿದ್ದರು. ಆಂಡ್ರೆ ರಸೆಲ್ 2019ರ ಐಪಿಎಲ್ನಲ್ಲಿ 52 ಸಿಕ್ಸರ್ ಬಾರಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದಾಗ ಅಥವಾ ರನ್ ಚೇಸ್ ಮಾಡುವಾಗ ವೇಗ ಹಾಗೂ ಸ್ಪಿನ್ನರ್ಗಳ ಎದುರು, ಎಲ್ಲ ಪರಿಸ್ಥಿತಿಯಲ್ಲಿ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಆಕ್ರಮಣಕಾರಿ ಶೈಲಿಯ ಬ್ಯಾಟರ್ ಸೂರ್ಯವಂಶಿ ಅವರ ಸ್ಥಿರ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ. ಈ ವರ್ಷದ ಐಪಿಎಲ್ನಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಬಾರಿ 30ಕ್ಕೂ ಅಧಿಕ ರನ್ ಗಳಿಸಿದ ಮೂರನೇ ಬ್ಯಾಟರ್ ಸೂರ್ಯವಂಶಿ.
ಸೂರ್ಯವಂಶಿ ಅವರು ತಾನು ಸಿಡಿಸಿದ 53 ಸಿಕ್ಸರ್ಗಳ ಪೈಕಿ 42 ಸಿಕ್ಸರ್ಗಳನ್ನು ವೇಗದ ಬೌಲರ್ಗಳ ಎದುರು ಸಿಡಿಸಿದ್ದಾರೆ. ಐಪಿಎಲ್ ಋತುವಿನಲ್ಲಿ ಬ್ಯಾಟರ್ರ್ವೊಬ್ಬನ ಶ್ರೇಷ್ಠ ಸಾಧನೆ ಇದಾಗಿದೆ. ಗೇಲ್ ಹಾಗೂ ರಸೆಲ್ ತಮ್ಮ ಐಪಿಎಲ್ ಋತುವಿನಲ್ಲಿ ವೇಗಿಗಳ ಎದುರು 40 ಸಿಕ್ಸರ್ಗಳನ್ನು ಬಾರಿಸಿದ್ದರು. ತಂಡಗಳು ಸೂರ್ಯವಂಶಿಗೆ ಸ್ಪಿನ್ ಬೌಲರ್ ಆಡಿಸಲು ಹಿಂಜರಿಯುತ್ತವೆ. ಸ್ಪಿನ್ನರ್ಗಳ ಎದುರು ಸೂರ್ಯವಂಶಿ ಕೇವಲ 45 ಎಸೆತಗಳನ್ನು ಎದುರಿಸಿದ್ದು, 11 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ವೇಗದ ಬೌಲರ್ಗಳ ವಿರುದ್ಧ ಕೇವಲ 203 ಎಸೆತಗಳನ್ನು ಎದುರಿಸಿರುವ ಸೂರ್ಯವಂಶಿ 238ರ ಸ್ಟ್ರೈಕ್ರೇಟ್ನಲ್ಲಿ 42 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ಸೂರ್ಯವಂಶಿ ಈ ವರ್ಷದ ಐಪಿಎಲ್ನಲ್ಲಿ ಸಿಡಿಸಿರುವ ನಾಲ್ಕು ಅರ್ಧಶತಕಗಳ ಪೈಕಿ ಮೂರನ್ನು ಕೇವಲ 15 ಎಸೆತಗಳನ್ನು ಪೂರ್ಣಗೊಳಿಸಿದ್ದರು. ಇನ್ನೊಂದು ಅರ್ಧಶತಕ ಗಳಿಸಲು 23 ಎಸೆತಗಳನ್ನು ಎದುರಿಸಿದ್ದರು. ಈ ಪೈಕಿ ಒಂದು ಪಂದ್ಯದಲ್ಲಿ 36 ಎಸೆತಗಳಲ್ಲಿ ಶತಕವನ್ನು ಗಳಿಸಿದ್ದರು. ಇದು ಐಪಿಎಲ್ನ ಮೂರನೇ ವೇಗದ ಶತಕವಾಗಿದೆ.






