ಧೋನಿ ಪಾದ ಸ್ಪರ್ಶಿಸಿದ ರಾಜಸ್ಥಾನದ ಬ್ಯಾಟರ್ ವೈಭವ್ ಸೂರ್ಯವಂಶಿ

PC : X \ IPL
ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ಮುಗಿದ ನಂತರದ ದೃಶ್ಯವೊಂದು ಎಲ್ಲರ ಗಮನ ಸೆಳೆಯಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್ ತಂಡವು ಸಿಎಸ್ಕೆ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿದ ನಂತರ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಬ್ಯಾಟಿಂಗ್ ಲೆಜೆಂಡ್ ಎಂ.ಎಸ್.ಧೋನಿ ಅವರ ಪಾದವನ್ನು ಮುಟ್ಟುತ್ತಿರುವುದು ಕಂಡುಬಂತು. ಈ ದೃಶ್ಯವು ಕ್ರಿಕೆಟ್ ಜಗತ್ತಿನಲ್ಲಿ ಎಲ್ಲರ ಹೃದಯವನ್ನು ಗೆದ್ದಿದೆ.
ವೈಭವ್ ಸೂರ್ಯವಂಶಿ, ಧೋನಿ ಪಾದವನ್ನು ಸ್ಪರ್ಶಿಸುತ್ತಿರುವ ದೃಶ್ಯವು ಕ್ಷಣಮಾತ್ರದಲ್ಲಿ ವೈರಲ್ ಆಗಿದೆ. ವೈಭವ್ ಅವರ ಈ ನಡವಳಿಕೆಯನ್ನು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದಾರೆ.
‘‘ನೀವು ನಮ್ಮ ಹೃದಯಗಳನ್ನು ಗೆದ್ದಿದ್ದೀರಿ,ವೈಭವ್! ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ನಲ್ಲಿ ಕ್ಲಿಪ್ವೊಂದನ್ನು ಸಿಎಸ್ಕೆ ಹಂಚಿಕೊಂಡಿದೆ.
ಕೇವಲ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ 2025ರ ಆವೃತ್ತಿಯ ಐಪಿಎಲ್ನಲ್ಲಿ ಈಗಾಗಲೇ ತನ್ನ ಅದ್ಭುತ ಪ್ರತಿಭೆಗಾಗಿ ಮಾತ್ರವಲ್ಲ ನಮ್ರತೆಗಾಗಿ ಹೆಚ್ಚು ಚರ್ಚೆಗೆ ಒಳಗಾದ ಆಟಗಾರನಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 38 ಎಸೆತಗಳಲ್ಲಿ ಶತಕ ಪೂರೈಸಿ 2ನೇ ಅತ್ಯಂತ ವೇಗದಲ್ಲಿ 100 ರನ್ ಗಳಿಸಿದ ಈ ಯುವ ಪ್ರತಿಭೆ ತಾನು ದೊಡ್ಡ ಹಂತಕ್ಕೆ ತಲುಪಿದ್ದೇನೆ ಎಂದು ಪದೇ ಪದೇ ಸಾಬೀತುಪಡಿಸಿದ್ದಾರೆ.
ಮಂಗಳವಾರ ನಡೆದ ಸಿಎಸ್ಕೆ ವಿರುದ್ಧದ ಐಪಿಎಲ್ ಪಂದ್ಯದಲ್ಲೂ ಮತ್ತೊಮ್ಮೆ ಮಿಂಚಿದ ವೈಭವ್ 33 ಎಸೆತಗಳಲ್ಲಿ 57 ರನ್ ಗಳಿಸುವುದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡವು 188 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಲು ನೆರವಾಗಿದ್ದರು.
ವೈಭವ್ ಪ್ರಯತ್ನ, ನಾಯಕ ಸಂಜು ಸ್ಯಾಮ್ಸನ್ರ ಬೆಂಬಲ ಹಾಗೂ ಧ್ರುವ್ ಜುರೆಲ್ ಸಾಹಸದಿಂದಾಗಿ ರಾಜಸ್ಥಾನ ರಾಯಲ್ಸ್ ತಂಡವು ಈ ಋತುವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದೆ.
ಸಿಎಸ್ಕೆ ತಂಡವು ಈ ವರ್ಷ ಸತತ 5ನೇ ಪಂದ್ಯವನ್ನು ಕಳೆದುಕೊಂಡು ಕಳಪೆ ಪ್ರದರ್ಶನ ಮುಂದುವರಿಸಿದೆ. ಮಧ್ಯಮ ಸರದಿಯಲ್ಲಿ ಆಯುಷ್ ಮ್ಹಾತ್ರೆ ಹಾಗೂ ಡೆವಾಲ್ಡ್ ಬ್ರೆವಿಸ್ ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ಆಕಾಶ್ ಮಧ್ವಾಲ್ ಶಿಸ್ತುಬದ್ದ ಬೌಲಿಂಗ್ ದಾಳಿಗೆ ತತ್ತರಿಸಿ 8 ವಿಕೆಟ್ಗಳ ನಷ್ಟಕ್ಕೆ 187 ರನ್ ಗಳಿಸಲಷ್ಟೇ ಶಕ್ತವಾಯಿತು.







