ವೈಭವ್ ಸೂರ್ಯವಂಶಿ ಐತಿಹಾಸಿಕ ಶತಕ ವ್ಯರ್ಥ; ಬಿಹಾರ ವಿರುದ್ಧ ಮಹಾರಾಷ್ಟ್ರಕ್ಕೆ ಗೆಲುವಿನ ಹಾರ

ವೈಭವ್ ಸೂರ್ಯವಂಶಿ | Photo : PTI
ಕೋಲ್ಕತಾ, ಡಿ.2: ಭಾರತದ ಯುವ ಪ್ರತಿಭೆ ವೈಭವ ಸೂರ್ಯವಂಶಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 176 ರನ್ ಗಳಿಸಿತು. 14ರ ವಯಸ್ಸಿನ ವೈಭವ್ ಕೇವಲ 61 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್ ಗಳ ಸಹಿತ ಔಟಾಗದೆ 108 ರನ್ ಗಳಿಸಿದರು. ಅರ್ಷಿನ್ ಕುಲಕರ್ಣಿ ಬೌಲಿಂಗ್ನಲ್ಲಿ ಬೌಂಡರಿ ಗಳಿಸಿದ ವೈಭವ್ 58 ಎಸೆತಗಳಲ್ಲಿ ಶತಕ ಪೂರೈಸಿದರು.
ಗೆಲ್ಲಲು 177 ರನ್ ಗುರಿ ಪಡೆದ ಮಹಾರಾಷ್ಟ್ರ ತಂಡವು ನಾಯಕ ಪೃಥ್ವಿ ಶಾ(66 ರನ್, 30 ಎಸೆತ, 11 ಬೌಂಡರಿ,1 ಸಿಕ್ಸರ್)ಅರ್ಧಶತಕದ ನೆರವಿನಿಂದ 19.1 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 182 ರನ್ ಗಳಿಸಿತು.
ಅರ್ಷಿನ್ ಕುಲಕರ್ಣಿ(1 ರನ್)ವಿಕೆಟನ್ನು ಕಳೆದುಕೊಂಡ ಮಹಾರಾಷ್ಟ್ರ ತಂಡವು ಕಳಪೆ ಆರಂಭ ಪಡೆದಿತ್ತು. ಆಗ ಎರಡನೇ ವಿಕೆಟ್ಗೆ 57 ರನ್ ಜೊತೆಯಾಟ ನಡೆಸಿದ ಪೃಥ್ವಿ ಹಾಗೂ ಮಂದರ್ ಭಂಡಾರಿ(4 ರನ್)ತಂಡವನ್ನು ಆಧರಿಸಿದರು. ನೀರಜ್ ಜೋಶಿ(30 ರನ್, 24 ಎಸೆತ), ರಂಜೀತ್ ನಿಕಮ್(27 ರನ್, 16 ಎಸೆತ)ಹಾಗೂ ನಿಖಿಲ್ ನಾಯಕ್(22 ರನ್, 13 ಎಸೆತ)ಸಾಂದರ್ಭಿಕ ಬ್ಯಾಟಿಂಗ್ ಮೂಲಕ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಮಹಾರಾಷ್ಟ್ರ ತಂಡಕ್ಕೆ 3 ವಿಕೆಟ್ಗಳ ಅಂತರದ ಗೆಲುವು ತಂದುಕೊಟ್ಟರು.







