IPL 2026 | ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್; ರಾಜಸ್ಥಾನ 2ನೇ ಕ್ವಾಲಿಫೈಯರ್ ಗೆ, ಹೈದರಾಬಾದ್ ಮನೆಗೆ

ವೈಭವ್ ಸೂರ್ಯವಂಶಿ | Photo Credit : PTI
ನ್ಯೂ ಚಂಡಿಗಡ, ಮೇ 27: ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್ (97 ರನ್, 29 ಎಸೆತ, 5 ಬೌಂಡರಿ, 12 ಸಿಕ್ಸರ್) ಹಾಗೂ ಜೋಫ್ರಾ ಆರ್ಚರ್ (3-58) ಅವರ ಅತ್ಯುತ್ತಮ ಬೌಲಿಂಗ್ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 47 ರನ್ಗಳ ಅಂತರದಿಂದ ಮಣಿಸಿದೆ.
ಈ ಮೂಲಕ ರಾಜಸ್ಥಾನ ತಂಡ ಎರಡನೇ ಕ್ವಾಲಿಫೈಯರ್ ಗೆ ತೇರ್ಗಡೆಯಾಗಿದ್ದು, ಮೇ 29ರಂದು ಗುಜರಾತ್ ಟೈಟಾನ್ಸ್ ತಂಡವನ್ನು ಇದೇ ಮೈದಾನದಲ್ಲಿ ಎದುರಿಸಲಿದೆ. ಹೈದರಾಬಾದ್ ತಂಡ ಈ ವರ್ಷದ ಟೂರ್ನಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 243 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಹೈದರಾಬಾದ್ ತಂಡವು 19.2 ಓವರ್ಗಳಲ್ಲಿ 196 ರನ್ ಗೆ ಆಲೌಟಾಗಿ ಸುಲಭವಾಗಿ ಶರಣಾಯಿತು.
ಇನಿಂಗ್ಸ್ ನ 2ನೇ ಎಸೆತದಲ್ಲೇ ಅಭಿಷೇಕ್ ಶರ್ಮಾ (0) ವಿಕೆಟ್ ಕಳೆದುಕೊಂಡ ಹೈದರಾಬಾದ್ ಕಳಪೆ ಆರಂಭ ಪಡೆಯಿತು. 2ನೇ ವಿಕೆಟ್ಗೆ 51 ರನ್ ಸೇರಿಸಿದ ಟ್ರಾವಿಸ್ ಹೆಡ್ (17 ರನ್, 8 ಎಸೆತ) ಹಾಗೂ ಇಶಾನ್ ಕಿಶನ್ (33 ರನ್, 11 ಎಸೆತ) ತಂಡವನ್ನು ಆಧರಿಸಲು ಯತ್ನಿಸಿದರು. ಈ ಇಬ್ಬರು ಬೇರ್ಪಟ್ಟ ನಂತರ ಹೈದರಾಬಾದ್ ತಂಡ ಕುಸಿತದ ಹಾದಿ ಹಿಡಿಯಿತು. ಕಿಶನ್, ಸ್ಮರಣ್ (1 ರನ್), ಹೆಡ್ ಹಾಗೂ ಕ್ಲಾಸೆನ್ (38 ರನ್, 20 ಎಸೆತ) ಬೆನ್ನುಬೆನ್ನಿಗೆ ಔಟಾದರು.
ನಿತೀಶ್ ರೆಡ್ಡಿ (38 ರನ್, 20 ಎಸೆತ), ಸಲೀಲ್ ಅರೋರ (35 ರನ್, 21 ಎಸೆತ) ಹಾಗೂ ಶಿವಾಂಗ್ ಕುಮಾರ್ (ಔಟಾಗದೆ 20 ರನ್) ಒಂದಷ್ಟು ಪ್ರತಿರೋಧ ಒಡ್ಡಿದರೂ ಅದು ಗೆಲುವಿಗೆ ಸಾಕಾಗಲಿಲ್ಲ.
ರಾಜಸ್ಥಾನದ ಪರ ಆರ್ಚರ್ ಯಶಸ್ವಿ ಪ್ರದರ್ಶನ ನೀಡಿದರು. ಜಡೇಜ (2-21), ಸುಶಾಂತ್ ಮಿಶ್ರಾ (2-21) ಹಾಗೂ ನಾಂಡ್ರೆ ಬರ್ಗರ್ (2-26) ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ರಾಜಸ್ಥಾನ ತಂಡದ ಇನಿಂಗ್ಸ್ ಆರಂಭಿಸಿದ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ (29 ರನ್, 29 ಎಸೆತ, 4 ಬೌಂಡರಿ) ಕೇವಲ 49 ಎಸೆತಗಳಲ್ಲಿ 125 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು.
ಸೂರ್ಯವಂಶಿ ವಿಕೆಟ್ ಉರುಳಿಸಿದ ಪ್ರಫುಲ್ ಹಿಂಗೇ ಮೊದಲ ವಿಕೆಟ್ ಜೊತೆಯಾಟಕ್ಕೆ ತೆರೆ ಎಳೆದರು. ಸೂರ್ಯವಂಶಿ ಕೇವಲ ಮೂರು ರನ್ ಗಳಿಂದ ಐಪಿಎಲ್ನ ವೇಗದ ಶತಕದಿಂದ ವಂಚಿತರಾದರು.
ಸೂರ್ಯವಂಶಿ ಔಟಾದ ಸ್ವಲ್ಪ ಹೊತ್ತಿನಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಒಪ್ಪಿಸಿದರು.
ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ ಕೇವಲ 21 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ಗಳ ಸಹಿತ ಬರೋಬ್ಬರಿ 50 ರನ್ ಗಳಿಸಿ ಪ್ರಫುಲ್ ಹಿಂಗೇಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮೊದಲು ನಾಯಕ ರಿಯಾನ್ ಪರಾಗ್ (26 ರನ್, 12 ಎಸೆತ) ಅವರೊಂದಿಗೆ ಮೂರನೇ ವಿಕೆಟ್ಗೆ 21 ಎಸೆತಗಳಲ್ಲಿ 55 ರನ್ ಜೊತೆಯಾಟದಲ್ಲಿ ಭಾಗಿಯಾದರು.
ನಾಯಕ ಪರಾಗ್ ರಾಜಸ್ಥಾನ ತಂಡದ ಸ್ಕೋರ್ 207 ತಲುಪಿದಾಗ ಪ್ರಫುಲ್ ಹಿಂಗೇಗೆ (3-54) ವಿಕೆಟ್ ಒಪ್ಪಿಸಿದರು.
ಪರಾಗ್ ಔಟಾದ ಬೆನ್ನಿಗೆ ದಸುನ್ ಶನಕ (5 ರನ್), ಡೊನಾವನ್ ಫೆರೇರ (12 ರನ್) ಹಾಗೂ ಜೋಫ್ರಾ ಆರ್ಚರ್ (4 ರನ್) ಔಟಾದರು. ಆಲ್ರೌಂಡರ್ ರವೀಂದ್ರ ಜಡೇಜ (ಔಟಾಗದೆ 12, 9 ಎಸೆತ) ರಾಜಸ್ಥಾನದ ಸ್ಕೋರ್ನ್ನು 243ಕ್ಕೆ ತಲುಪಿಸಿದರು.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ ರಾಯಲ್ಸ್: 20 ಓವರ್ಗಳಲ್ಲಿ 243/8
(ವೈಭವ್ ಸೂರ್ಯವಂಶಿ 97, ಧ್ರುವ ಜುರೆಲ್ 50, ಯಶಸ್ವಿ ಜೈಸ್ವಾಲ್ 29, ರಿಯಾನ್ ಪರಾಗ್ 26, ರವೀಂದ್ರ ಜಡೇಜ ಔಟಾಗದೆ 12, ಪ್ರಫುಲ್ ಹಿಂಗೇ 3-54, ನಿತೀಶ್ ರೆಡ್ಡಿ 1-12, ಶಿವಾಂಗ್ ಸಿಂಗ್ 1-19)
ಸನ್ ರೈಸರ್ಸ್ ಹೈದರಾಬಾದ್:
19.2 ಓವರ್ ಗಳಲ್ಲಿ 196 ರನ್ಗೆ ಆಲೌಟ್
(ನಿತೀಶ್ ರೆಡ್ಡಿ 38, ಇಶಾನ್ ಕಿಶನ್ 33, ಸಲೀಲ್ ಅರೋರ 35, ಶಿವಾಂಗ್ ಕುಮಾರ್ 27, ಜೋಫ್ರಾ ಆರ್ಚರ್ 3-58, ರವೀಂದ್ರ ಜಡೇಜ 2-21, ನಾಂಡ್ರೆ ಬರ್ಗರ್ 2-26, ಸುಶಾಂತ್ ಮಿಶ್ರಾ 2-21)






