ಭಾರತದ ಪುರುಷರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ | Photo Credit : PTI
ಹೊಸದಿಲ್ಲಿ, ಜೂ.6: ಇಂಗ್ಲೆಂಡ್ ಹಾಗೂ ಐರ್ಲ್ಯಾಂಡ್ ವಿರುದ್ಧದ ಟಿ-20 ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಸೀನಿಯರ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ 15ರ ವಯಸ್ಸಿನ ವೈಭವ್ ಸೂರ್ಯವಂಶಿ ಭಾರೀ ಚರ್ಚೆಗೆ ಗ್ರಾಸರಾಗಿದ್ದಾರೆ. ಭಾರತದ ಪುರುಷರ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಕಿರಿಯ ವಯಸ್ಸಿನ ಆಟಗಾರನಾಗುವ ಹಾದಿಯಲ್ಲಿದ್ದಾರೆ.
ಶನಿವಾರ ತಂಡ ಪ್ರಕಟಿಸಿರುವ ಬಿಸಿಸಿಐ, ಮುಂಬರುವ ಐರ್ಲ್ಯಾಂಡ್ ಹಾಗೂ ಇಂಗ್ಲೆಂಡ್ ಪ್ರವಾಸಗಳು ಹಾಗೂ ಜಪಾನ್ನಲ್ಲಿ ನಡೆಯಲಿರುವ 2026ರ ಏಶ್ಯನ್ ಗೇಮ್ಸ್ಗಾಗಿ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸಿದ್ದ ಸೂರ್ಯವಂಶಿ ಅವರನ್ನು ಆಯ್ಕೆ ಮಾಡಿದೆ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿರುವ ಸೂರ್ಯವಂಶಿ ‘ಆರೆಂಜ್ ಕ್ಯಾಪ್’ ತನ್ನದಾಗಿಸಿಕೊಂಡಿದ್ದಾರೆ.
ಒಂದು ವೇಳೆ ಸೂರ್ಯವಂಶಿ ಚೊಚ್ಚಲ ಪಂದ್ಯವನ್ನಾಡಿದರೆ, ಸಚಿನ್ ತೆಂಡುಲ್ಕರ್ ಹೆಸರಲ್ಲಿರುವ ದಾಖಲೆಯನ್ನು ಮುರಿಯಲಿದ್ದಾರೆ. ಭಾರತದ ಪುರುಷರ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಬಿಹಾರದ ಬಾಲ ಪ್ರತಿಭೆ ಸೂರ್ಯವಂಶಿ ಕಳೆದ ವರ್ಷ ಯಶಸ್ಸಿನ ಶಿಖರ ಏರಿದ್ದರು. 2026ರ ಅಂಡರ್-19 ವಿಶ್ವಕಪ್ ಅಭಿಯಾನದಲ್ಲಿ ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದ ಸೂರ್ಯವಂಶಿ, ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಎರಡೂ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.
2026ರ ಐಪಿಎಲ್ನಲ್ಲೂ ತಮ್ಮ ಶ್ರೇಷ್ಠ ಫಾರ್ಮ್ ಅನ್ನು ಮುಂದುವರಿಸಿದ್ದ ಎಡಗೈ ಬ್ಯಾಟರ್, 237.30ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 776 ರನ್ ಗಳಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಭಾರತದ ಅತ್ಯಂತ ಕಿರಿಯ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ತೆಂಡುಲ್ಕರ್ 16 ವರ್ಷ 205 ದಿನಗಳ ವಯಸ್ಸಿನಲ್ಲಿ ಮೊದಲ ಪಂದ್ಯವನ್ನಾಡಿದ್ದರು. ಅವರ ಬಳಿಕ ಪಿಯೂಷ್ ಚಾವ್ಲಾ (17 ವರ್ಷ 75 ದಿನಗಳು), ಲಕ್ಷ್ಮಣ್ ಶಿವರಾಮಕೃಷ್ಣನ್ (17 ವರ್ಷ 118 ದಿನಗಳು) ಹಾಗೂ ಪಾರ್ಥಿವ್ ಪಟೇಲ್ (17 ವರ್ಷ 152 ದಿನಗಳು) ಇದ್ದಾರೆ.
ಕೇವಲ 15ರ ವಯಸ್ಸಿನ ಸೂರ್ಯವಂಶಿ ಇತಿಹಾಸವನ್ನು ಮರುರಚಿಸಿ ಮತ್ತೊಂದು ಚರಿತ್ರೆ ನಿರ್ಮಿಸುವ ವಿಶ್ವಾಸ ಮೂಡಿಸಿದ್ದಾರೆ.






