15ರ ಹರೆಯದಲ್ಲೇ ಬಿಹಾರ ತಂಡದ ನಾಯಕನಾದ ವೈಭವ್ ಸೂರ್ಯವಂಶಿ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ ನಾಯಕತ್ವ

ವೈಭವ್ ಸೂರ್ಯವಂಶಿ | Photo Credit : PTI
ಹೊಸದಿಲ್ಲಿ: ಕೇವಲ 15ನೇ ವಯಸ್ಸಿನಲ್ಲೇ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಬಿಹಾರ ಹಿರಿಯರ ಕ್ರಿಕೆಟ್ ತಂಡದ ನಾಯಕತ್ವದ ಹೊಣೆ ಹೊತ್ತಿದ್ದಾರೆ. ನವೆಂಬರ್ 14ರಿಂದ ಆರಂಭವಾಗಲಿರುವ 2026-27ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ ಅವರನ್ನು ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ.
ಬಿಹಾರ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಆಯ್ಕೆ ಸಮಿತಿಯು ಇಂದೋರ್ ನಲ್ಲಿ ನಡೆಯಲಿರುವ ಆರಂಭಿಕ ಎರಡು ಪಂದ್ಯಗಳಿಗೆ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಪಂದ್ಯಗಳಲ್ಲಿ ಬಿಹಾರ ಪರ ಆಡಿದ ಬಳಿಕ, ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಗಾಗಿ ಸೂರ್ಯವಂಶಿ ಭಾರತ ಎ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಅಂತರರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಈಗಾಗಲೇ ತಮ್ಮ ಪ್ರತಿಭೆಯ ಛಾಪು ಮೂಡಿಸಿರುವ ಸೂರ್ಯವಂಶಿಗೆ ಇದು ಮಹತ್ವದ ಜವಾಬ್ದಾರಿಯಾಗಿದೆ. ಕಳೆದ ಋತುವಿನಲ್ಲಿ ಬಿಹಾರದ ರಣಜಿ ಟ್ರೋಫಿ ತಂಡದ ಮೊದಲ ಎರಡು ಪಂದ್ಯಗಳಿಗೆ ಸಕೀಬುಲ್ ಗನಿ ನಾಯಕರಾಗಿದ್ದಾಗ ಸೂರ್ಯವಂಶಿ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದರು.
2024ರ ಜನವರಿಯಲ್ಲಿ ಮುಂಬೈ ವಿರುದ್ಧದ ಪಂದ್ಯದ ಮೂಲಕ ಕೇವಲ 12ನೇ ವಯಸ್ಸಿನಲ್ಲಿ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.
ವಯೋಮಿತಿ ಕ್ರಿಕೆಟ್ ನಲ್ಲಿಯೂ ನಾಯಕತ್ವದ ಅನುಭವ ಹೊಂದಿರುವ ಸೂರ್ಯವಂಶಿ, ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನಡೆದ ಮೂರು ಪಂದ್ಯಗಳ ಯೂತ್ ಏಕದಿನ ಸರಣಿಯಲ್ಲಿ ಭಾರತ ಅಂಡರ್-19 ತಂಡವನ್ನು ಮುನ್ನಡೆಸಿದ್ದರು. ನಿಯಮಿತ ನಾಯಕ ಆಯುಷ್ ಮ್ಹಾತ್ರೆ ಗಾಯದ ಕಾರಣದಿಂದ ಸರಣಿಗೆ ಅಲಭ್ಯರಾಗಿದ್ದರಿಂದ ಈ ಅವಕಾಶ ಅವರಿಗೆ ಲಭಿಸಿತ್ತು.
ನಂತರ ಫೆಬ್ರವರಿಯಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿಯೂ ಸೂರ್ಯವಂಶಿ ಸ್ಥಾನ ಪಡೆದಿದ್ದರು. ಆದರೆ ಆ ಟೂರ್ನಿಯಲ್ಲಿ ಆಯುಷ್ ಮ್ಹಾತ್ರೆ ತಂಡವನ್ನು ಮುನ್ನಡೆಸಿದ್ದರು.
ಇತ್ತೀಚೆಗೆ ನ್ಯೂಝಿಲೆಂಡ್ ನಲ್ಲಿ ಮುಕ್ತಾಯಗೊಂಡ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯಲ್ಲಿ ಆಡಿದ ಬಳಿಕ ಸೂರ್ಯವಂಶಿ ಬಿಹಾರ ತಂಡದ ನಾಯಕತ್ವದ ಹೊಣೆ ವಹಿಸಿಕೊಳ್ಳುತ್ತಿದ್ದಾರೆ. ಭಾರತದ ಆರಂಭಿಕ ಆಟಗಾರರ ಸ್ಥಾನಕ್ಕೆ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಆದ್ಯತೆ ದೊರೆಯುತ್ತಿರುವುದರಿಂದ ಸೂರ್ಯವಂಶಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಚ್ಚು ಅವಕಾಶಗಳು ಲಭಿಸಿರಲಿಲ್ಲ. ನ್ಯೂಝಿಲೆಂಡ್ ಪ್ರವಾಸದಲ್ಲಿ ಅವರು ಎರಡು ಪಂದ್ಯಗಳನ್ನಷ್ಟೇ ಆಡಿದ್ದರು.
19 ಎಸೆತಗಳಲ್ಲಿ 45 ರನ್
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸೂರ್ಯವಂಶಿ ಗಮನಾರ್ಹ ಪ್ರದರ್ಶನ ನೀಡಿದ್ದರು. ವೆಲ್ಲಿಂಗ್ಟನ್ ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿದ್ದರು.
ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಸೂರ್ಯವಂಶಿ, ಭಾರತಕ್ಕೆ ದಾಖಲೆಯ ಆರಂಭ ಒದಗಿಸಿದ್ದರು. ಈ ಜೋಡಿ ಮೊದಲ ಆರು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 118 ರನ್ ಕಲೆಹಾಕಿತ್ತು. ಪುರುಷರ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪವರ್ ಪ್ಲೇ ಅವಧಿಯಲ್ಲಿ ದಾಖಲಾದ ಗರಿಷ್ಠ ರನ್ಗಳ ಮೊತ್ತ ಇದಾಗಿದೆ.
ನ್ಯೂಝಿಲೆಂಡ್ ನೀಡಿದ್ದ 199 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಪರ ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ 113 ರನ್ ಗಳಿಸಿದ್ದರು.
ನಾಯಕತ್ವಕ್ಕೆ ಬಿಸಿಎ ಬೆಂಬಲ
ಸೂರ್ಯವಂಶಿಗೆ ನಾಯಕತ್ವದ ಜವಾಬ್ದಾರಿ ನೀಡಿರುವುದಕ್ಕೆ ಬಿಹಾರ ಕ್ರಿಕೆಟ್ ಸಂಸ್ಥೆ ಬೆಂಬಲ ವ್ಯಕ್ತಪಡಿಸಿದೆ. ಈ ಅವಕಾಶವು ಅವರನ್ನು ಉತ್ತಮ ನಾಯಕನಾಗಿ ರೂಪಿಸಲು ನೆರವಾಗಲಿದೆ ಎಂದು ಬಿಸಿಎ ಅಧ್ಯಕ್ಷ ಹರ್ಷ ವರ್ಧನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ವೈಭವ್ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಪ್ರತಿಭೆ, ಆತ್ಮವಿಶ್ವಾಸ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು ಶಿಸ್ತುಬದ್ಧ ಹಾಗೂ ಸ್ಪರ್ಧಾತ್ಮಕ ಪ್ರದರ್ಶನ ನೀಡಲಿದೆ ಎಂದು ನಾವು ಭಾವಿಸುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ತಂಡವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ದಿಲ್ಲಿ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರೈಲ್ವೇಸ್, ಸೌರಾಷ್ಟ್ರ ಮತ್ತು ತಮಿಳುನಾಡು ತಂಡಗಳು ಇದೇ ಗುಂಪಿನಲ್ಲಿವೆ. ನವೆಂಬರ್ 14ರಂದು ಇಂದೋರ್ನಲ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯದೊಂದಿಗೆ ಬಿಹಾರ ತನ್ನ ಅಭಿಯಾನ ಆರಂಭಿಸಲಿದೆ.
ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ಗಳಾದ ಆಯುಷ್ ಲೋಹರುಕ ಮತ್ತು ಅನ್ಮೋಲ್ ಕುಮಾರ್ ಸ್ಥಾನ ಪಡೆದಿದ್ದಾರೆ. ಸೂರಜ್ ಕಶ್ಯಪ್ ಅವರನ್ನು ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಮಂಗಲ್ ಮಹೌರ್ ಮತ್ತು ಶಕೀಬ್ ಹುಸೇನ್ ಅವರ ಆಯ್ಕೆಯನ್ನು ಅವರ ದೈಹಿಕ ಕ್ಷಮತೆಯ ಆಧಾರದ ಮೇಲೆ ನಿರ್ಧರಿಸಲು ಆಯ್ಕೆ ಸಮಿತಿ ತೀರ್ಮಾನಿಸಿದೆ. ಮೊದಲ ಎರಡು ಪಂದ್ಯಗಳ ಬಳಿಕ ಅವರು ಆಡಲು ಲಭ್ಯವಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಬಿಹಾರ ತಂಡ: ವೈಭವ್ ಸೂರ್ಯವಂಶಿ (ನಾಯಕ), ಅಲೋಕ್ ಕುಮಾರ್, ಆಯುಷ್ ಲೋಹರುಕ (ವಿಕೆಟ್ ಕೀಪರ್), ಅಲ್ತಮಾಶ್ ಅಶ್ರಫ್, ಪರಮ್ ಕುಮಾರ್ ಸಿಂಗ್, ಅನ್ಮೋಲ್ ಕುಮಾರ್ (ವಿಕೆಟ್ ಕೀಪರ್), ರಿತ್ವಿಕ್ ರಾಜ್, ಸೂರಜ್ ಕಶ್ಯಪ್ (ಉಪನಾಯಕ), ಮಯಾಂಕ್ ಕುಮಾರ್, ರಾಘವೇಂದ್ರ ಪ್ರತಾಪ್, ಆಶಿಶ್ ಕುಮಾರ್, ವಾಸುದೇವ ಪ್ರತಾಪ್ ಸಿಂಗ್, ಮೊಹಮ್ಮದ್ ಇಝಾರ್, ಅಮೋದ್ ಯಾದವ್, ಪ್ರಶಾಂತ್ ಸಿಂಗ್, ನವಾಜ್ ಖಾನ್ ಮತ್ತು ಹಿಮಾಂಶು ಸಿಂಗ್.
ಬದಲಿ ಆಟಗಾರರು: ಬಿಪಿನ್ ಸೌರಭ್, ಸುಮನ್ ಕುಮಾರ್, ಆಕಾಶ್ ರಾಜ್, ಖಾಲಿದ್ ಆಲಂ, ಭಾಸ್ಕರ್ ದುಬೆ, ಕುಮಾರ್ ರಜನೀಶ್, ಸುಯಶ್, ಅಭಿಜೀತ್ ಸಾಕೇತ್, ಯಶಸ್ವಿ ರಿಷಭ್, ಲಖನ್ ರಾಜಾ, ಪವನ್ ಕುಮಾರ್, ಅಮಿತ್ ಚೌಧರಿ, ಪಿಯೂಷ್ ಸಿಂಗ್, ಭಾನು ಕುಮಾರ್, ಲೋಕೇಶ್ ಬಾಬುಲಾಲ್ ಕುಮಾರ್ ಮತ್ತು ಪ್ರಶಾಂತ್ ಶ್ರೀವಾಸ್ತವ.






