ಅಂಡರ್-19 ಏಷ್ಯಾ ಕಪ್ ನ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ವಿಫಲ
ವೈಭವ್ ಸೂರ್ಯವಂಶಿ | PTI
ಹೊಸದಿಲ್ಲಿ : ಐಪಿಎಲ್ನಲ್ಲಿ ಕಿರಿಯ ವಯಸ್ಸಿನ ಕೋಟ್ಯಧಿಪತಿಯಾದ ನಂತರ ವೈಭವ್ ಸೂರ್ಯವಂಶಿ ಕ್ರಿಕೆಟ್ ವಲಯದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ದುಬೈನಲ್ಲಿ ನಡೆಯುತ್ತಿರುವ ಅಂಡರ್-19 ಏಶ್ಯಕಪ್ನಲ್ಲಿ ಭಾಗವಹಿಸಿರುವ 13ರ ಹರೆಯದ ಬಾಲಕ ಸೂರ್ಯವಂಶಿ ಮೇಲೆ ಎಲ್ಲರ ಚಿತ್ತ ಹರಿದಿದೆ. ಆದರೆ ಪಾಕಿಸ್ತಾನ ವಿರುದ್ಧ ಶನಿವಾರ ಆಡಿದ ಮೊದಲ ಏಷ್ಯಾ ಕಪ್ ಪಂದ್ಯದಲ್ಲಿ ಯುವ ಪ್ರತಿಭಾವಂತ ಆಟಗಾರ ನಿರೀಕ್ಷಿತ ಮಟ್ಟವನ್ನು ತಲುಪದೆ ಕೇವಲ 1 ರನ್ಗೆ ಔಟಾದರು.
ಮೊದಲು ಬ್ಯಾಟಿಂಗ್ ಮಾಡಿರುವ ಪಾಕಿಸ್ತಾನ ತಂಡವು 7 ವಿಕೆಟ್ಗಳ ನಷ್ಟಕ್ಕೆ 281 ರನ್ ಗಳಿಸಿದೆ.
ಸೌದಿ ಅರೇಬಿಯದ ಜಿದ್ದಾದಲ್ಲಿ ಇತ್ತೀಚೆಗೆ ನಡೆದಿರುವ ಐಪಿಎಲ್-2025ರ ಮೆಗಾ ಹರಾಜಿನ ವೇಳೆ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ತಂಡವು 1.1 ಕೋ.ರೂ.ಗೆ ಖರೀದಿಸಿತು.
ಐಪಿಎಲ್ ಹರಾಜಿನ ವೇಳೆ ನಡೆದ ತುರುಸಿನ ಬಿಡ್ಡಿಂಗ್ ವಾರ್ನಲ್ಲಿ 13ರ ಹರೆಯದ ಸೂರ್ಯವಂಶಿ ಎಲ್ಲರ ಗಮನ ಸೆಳೆದಿದ್ದರು. ರಾಜಸ್ಥಾನ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೂರ್ಯವಂಶಿಯನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಭಾರೀ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ರಾಜಸ್ಥಾನ ತಂಡವು 1.1 ಕೋ.ರೂ.ಗೆ ಬಿಡ್ ಜಯಿಸಿತು.
ಬಿಹಾರದಲ್ಲಿ 2011ರ ಮಾರ್ಚ್ 27ರಂದು ಜನಿಸಿದ್ದ ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ಆಡಲಿರುವ ಅತ್ಯಂತ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ. 2024ರ ಜನವರಿಯಲ್ಲಿ ಕೇವಲ 12 ವರ್ಷ ಹಾಗೂ 284ನೇ ದಿನದಂದು ಬಿಹಾರದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಕಳೆದ ತಿಂಗಳು ಚೆನ್ನೈನಲ್ಲಿ ನಡೆದಿದ್ದ ಆಸ್ಟ್ರೇಲಿಯ ತಂಡದ ವಿರುದ್ಧದ ಅಂಡರ್-19 ಪಂದ್ಯದಲ್ಲಿ 58 ಎಸೆತಗಳಲ್ಲಿ ಶತಕ ಸಿಡಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದರು.
ಸೂರ್ಯವಂಶಿ ತನ್ನ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಐದು ಪಂದ್ಯಗಳನ್ನು ಆಡಿದ್ದು, 100 ರನ್ ಗಳಿಸಿದ್ದಾರೆ. 41 ಗರಿಷ್ಠ ಸ್ಕೋರಾಗಿದೆ. ಸದ್ಯ ಅವರು ರಣಜಿ ಟ್ರೋಫಿಯಲ್ಲಿಯೂ ಆಡುತ್ತಿದ್ದಾರೆ.
ಸೂರ್ಯವಂಶಿ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರವನ್ನು ಪ್ರತಿನಿಧಿಸಿದ್ದು, ನವೆಂಬರ್ 23ರಂದು ರಾಜಸ್ಥಾನ ವಿರುದ್ಧ ತನ್ನ ಚೊಚ್ಚಲ ಟಿ-20 ಪಂದ್ಯ ಆಡಿದ್ದರು.