ವೈಭವ್ ಸೂರ್ಯವಂಶಿಯ 10 ವರ್ಷದ ಸಹೋದರ ಆಶೀರ್ವಾದ್ ಶತಕ!

Photo: x.com/ndtvindia
ಹೊಸದಿಲ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸುದ್ದಿ ಮಾಡುತ್ತಿರುವ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯವರ ಹತ್ತು ವರ್ಷದ ತಮ್ಮ ಆಶೀರ್ವಾದ್ ಸೂರ್ಯವಂಶಿ ಕೂಡಾ ಇದೀಗ ಪ್ರಭಾವಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಸಮಷ್ಟಿಪುರದಲ್ಲಿ ನಡೆದ ಸ್ಥಳೀಯ ಅಭ್ಯಾಸ ಪಂದ್ಯದಲ್ಲಿ ಆಶೀರ್ವಾದ್ ಮಿಂಚಿನ ಶತಕ ಸಿಡಿಸಿದ್ದು, ಇದೇ ಕುಟುಂಬದಿಂದ ಮತ್ತೊಬ್ಬ ಯುವ ಪ್ರತಿಭೆ ರೂಪುಗೊಳ್ಳುವ ಸಂದೇಶ ರವಾನಿಸಿದ್ದಾರೆ.
ತೇಜಪುರ ಕ್ರಿಕೆಟ್ ಅಕಾಡೆಮಿಯನ್ನು ಪ್ರತಿನಿಧಿಸುತ್ತಿರುವ ಆಶೀರ್ವಾದ್ 87 ಎಸೆತಗಳಲ್ಲಿ 103 ರನ್ ಸಿಡಿಸಿದರು. ಇನಿಂಗ್ಸ್ನಲ್ಲಿ 20 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದು, 118.39 ಸ್ಟ್ರೈಕ್ರೇಟ್ನೊಂದಿಗೆ ಗಮನ ಸೆಳೆದರು. ವಿಶ್ವದರ್ಜೆಯ ಬೌಲರ್ಗಳಿಗೆ ದುಃಸ್ವಪ್ನವಾಗಿ ಕಾಡುತ್ತಿರುವ ವೈಭವ್ ಸೂರ್ಯವಂಶಿಯನ್ನೇ ಹೋಲುವ ಈ ಪೋರ ಕೂಡಾ ನಿರ್ಭೀತಿಯಿಂದ ಬ್ಯಾಟ್ ಬೀಸಿದರು.
ಆಶೀರ್ವಾದ್ ಆಕರ್ಷಕ ಶತಕದಿಂದ ತೇಜಪುರ ಕ್ರಿಕೆಟ್ ಅಕಾಡೆಮಿ 29.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಶಿವರಾಮ್ ರಾಜ್ 52 ರನ್ಗಳ ಕೊಡುಗೆ ನೀಡಿದರು. ಶತಕ ಸಿಡಿಸಿದ ಪೋರ ಹೆಲ್ಮೆಟ್ ತೆಗೆದು ಸಂಭ್ರಮಿಸುತ್ತಿರುವ ಕ್ಷಣ ಎಲ್ಲರ ಗಮನ ಸೆಳೆದಿದೆ.
ಈ ಸಾಧನೆಯನ್ನು ತ್ರಿಕೋಣ ಸರಣಿಗಾಗಿ ಶ್ರೀಲಂಕಾಗೆ ತೆರಳಿರುವ ಪ್ರಸಕ್ತ ಭಾರತ ಎ ತಂಡದಲ್ಲಿರುವ ವೈಭವ್ ಸೂರ್ಯವಂಶಿ ಕೂಡಾ ಸಂಭ್ರಮಿಸಿದರು. 15 ವರ್ಷದ ಯುವ ಆಟಗಾರ ತಮ್ಮ ಸಹೋದರನ ಸ್ಕೋರ್ಕಾರ್ಡ್ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.






