ಕಿರಿಯರ ಕ್ರಿಕೆಟ್ ನಲ್ಲಿ ವೈಭವ್ ಸೂರ್ಯವಂಶಿ ಆಡುವುದು ಬೆಳವಣಿಗೆಗೆ ಮಾರಕ: ಮಾಜಿ ಕ್ರಿಕೆಟರ್ ಹೇಳಿದ್ದೇನು?

PC: x.com/RR_for_LIFE
ಮುಂಬೈ: ಭರವಸೆಯ ಬ್ಯಾಟಿಂಗ್ ಕುಡಿ ವೈಭವ್ ಸೂರ್ಯವಂಶಿಯವರನ್ನು 19 ವರ್ಷದ ವಯೋಮಿತಿಯ ತಂಡದಲ್ಲಿ ಆಡಿಸುವುದು ಅವರ ಪ್ರಗತಿಗೆ ಮಾರಕ ಎಂದು ಭಾರತ ಮಹಿಳಾ ತಂಡದ ಮಾಜಿ ಮುಖ್ಯಕೋಚ್ ಡಬ್ಲ್ಯು.ವಿ.ರಮಣ್ ಅಭಿಪ್ರಾಯಪಟ್ಟಿದ್ದಾರೆ. ದೊಡ್ಡ ಚಿತ್ರಣವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಅವರನ್ನು ಕಿರಿಯರ ಕ್ರಿಕೆಟ್ ನಲ್ಲಿ ಆಡಿಸುವುದರಿಂದ ಧೀರ್ಘಾವಧಿಯಲ್ಲಿ ಅವರ ಬೆಳವಣಿಗೆಗೆ ಅದು ಪ್ರತಿಕೂಲವಾಗಿ ಕೆಲಸ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
ಭಾರತ ತಂಡ 19ರ ವಯೋಮಿತಿಯ ವಿಶ್ವಕಪ್ ನಲ್ಲಿ ಗೆಲುವಿನ ಅಭಿಯಾನ ಆರಂಭಿಸಿದ ದಿನವೇ ರಮಣ್ ಅವರ ಹೇಳಿಕೆ ಕುತೂಹಲ ಮೂಡಿಸಿದೆ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಆಯುಷ್ ಮಾಟ್ರೆ ನೇತೃತ್ವದ ಭಾರತ ಕಿರಿಯರ ತಂಡ ಡಿಎಲ್ಎಸ್ ನಿಯಮಾವಳಿಯಡಿ ಆರು ವಿಕೆಟ್ ಗಳ ಗೆಲುವು ಸಾಧಿಸಿ ಬಿ ಗುಂಪಿನಲ್ಲಿ 1-0 ಮುನ್ನಡೆ ಗಳಿಸಿತ್ತು.
ಕಳೆದ ಒಂದು ವರ್ಷದಿಂದ ಭಾರತದ ಕ್ರಿಕೆಟ್ ರಂಗದಲ್ಲಿ ಸೂರ್ಯವಂಶಿ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಕಳೆದ ಸೀಸನ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಪದಾರ್ಪಣೆ ಮಾಡಿದ ಬಳಿಕ, ಟೂರ್ನಿಯ ಇತಿಹಾಸದಲ್ಲೇ ಶತಕದ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಗಳಲ್ಲಿ ಕೂಡಾ ಅದ್ಭುತ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ನಲ್ಲಿ ಭಾರತ ಎ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿತ್ತು.
19ರ ವಯೋಮಿತಿಯ ವಿಶ್ವಕಪ್ ನಲ್ಲಿ ಭಾರತ ತಂಡದ ಪ್ರಮುಖ ಆಟಗಾರರ ಪೈಕಿ ಸೂರ್ಯವಂಶಿ ಒಬ್ಬರಾಗಿದ್ದರೂ, ಸೂರ್ಯವಂಶಿಯವರ ಕ್ಷಿಪ್ರ ಸಾಧನೆಯನ್ನು ಹೆಚ್ಚು ಜಾಗರೂಕತೆಯಿಂದ ಪರಿಗಣಿಸಬೇಕು ಎಂದು ರಮಣ್ ಅಭಿಪ್ರಾಯಪಟ್ಟಿದ್ದಾರೆ.
"ಅವರು ಪಂದ್ಯಗಳನ್ನು ಗೆದ್ದುಕೊಡಬಲ್ಲರು ಎನ್ನುವುದು ನಿಸ್ಸಂದೇಹ. ಆದರೆ ಸದಾ ವಿಸ್ತೃತ ಚಿತ್ರಣದ ಅಗತ್ಯವಿದೆ" ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 50 ಎಸೆತಗಳಲ್ಲಿ 96 ರನ್ ಸಿಡಿಸಿದ್ದ ಸೂರ್ಯವಂಶಿ, ಅಮೆರಿಕ ವಿರುದ್ಧದ ಪಂದ್ಯದಲ್ಲಿ ಕೇವಲ ನಾಲ್ಕು ಎಸೆತಗಳನ್ನು ಎದುರಿಸಿದ ಸೂರ್ಯವಂಶಿ 2 ರನ್ ಗಳಿಸಿ ಸ್ಟಂಪ್ ಔಟ್ ಆಗಿದ್ದರು.







