ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಕೋಚ್ ಆಗಿ ವರುಣ್ ಆ್ಯರೊನ್ ಸೇರ್ಪಡೆ

PC | X.com\ @CricCrazyJohns
ಹೊಸದಿಲ್ಲಿ, ಜು.14: ಸನ್ರೈಸರ್ಸ್ ಹೈದರಾಬಾದ್ ತಂಡವು 2026ರ ಆವೃತ್ತಿಯ ಐಪಿಎಲ್ ಟೂರ್ನಿಗೆ ಭಾರತ ತಂಡದ ಮಾಜಿ ವೇಗದ ಬೌಲರ್ ವರುಣ್ ಆ್ಯರೊನ್ ಅವರನ್ನು ತನ್ನ ಬೌಲಿಂಗ್ ಕೋಚ್ ಆಗಿ ನೇಮಿಸಿದೆ.
ಆ್ಯರೊನ್ ಅವರು ನ್ಯೂಝಿಲ್ಯಾಂಡ್ನ ಮಾಜಿ ಎಡಗೈ ವೇಗದ ಬೌಲರ್ ಜೇಮ್ಸ್ ಫ್ರಾಂಕ್ಲಿನ್ ರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ.
‘‘ನಮ್ಮ ಕೋಚಿಂಗ್ ಸಿಬ್ಬಂದಿ ವಿಭಾಗಕ್ಕೆ ಹೊಸ ಸೇರ್ಪಡೆ! ನಮ್ಮ ನೂತನ ಬೌಲಿಂಗ್ ಕೋಚ್ ವರುಣ್ ಆ್ಯರೊನ್ಗೆ ಸುಸ್ವಾಗತ’’ ಎಂಬ ಸಂದೇಶವನ್ನು ತನ್ನ ಎಕ್ಸ್ ಖಾತೆಯಲ್ಲಿ ಎಸ್ಆರ್ಎಚ್ ಹಂಚಿಕೊಂಡಿದೆ.
ಆ್ಯರೊನ್ 2011 ಹಾಗೂ 2015ರ ನಡುವೆ ಭಾರತ ತಂಡದ ಪರ ಅಂತರ್ರಾಷ್ಟ್ರೀಯ ವೃತ್ತಿಜೀವನದಲ್ಲಿ 9 ಟೆಸ್ಟ್ ಹಾಗೂ 9 ಏಕದಿನ ಪಂದ್ಯಗಳನ್ನು ಆಡಿದ್ದರು. ಈ ವರ್ಷದ ಜನವರಿಯಲ್ಲಿ ಜೈಪುರದಲ್ಲಿ ಗೋವಾ ತಂಡದ ವಿರುದ್ಧ ಜಾರ್ಖಂಡ್ ತಂಡವನ್ನು ಪ್ರತಿನಿಧಿಸುವ ಮೂಲಕ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ತನ್ನ ಕೊನೆಯ ಸ್ಪರ್ಧಾತ್ಮಕ ಪಂದ್ಯ ಅಡಿದ್ದರು.
ದೇಶೀಯ 50 ಓವರ್ ಟೂರ್ನಮೆಂಟ್ನಲ್ಲಿ ಜಾರ್ಖಂಡ್ ತಂಡವು ನಾಕೌಟ್ ಹಂತಕ್ಕೆ ತಲುಪುವಲ್ಲಿ ವಿಫಲವಾದ ನಂತರ ಆ್ಯರೊನ್ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರು.
ಆ್ಯರೊನ್ ಅವರು ನಿರಂತರವಾಗಿ ಗಂಟೆಗೆ 150 ಕಿ.ಮೀ.ವೇಗದಲ್ಲಿ ಬೌಲಿಂಗ್ ಮಾಡಿದ ಯುವ ವೇಗದ ಬೌಲರ್ ಎನಿಸಿಕೊಂಡು ಕ್ರಿಕೆಟ್ನಲ್ಲಿ ತನ್ನ ಛಾಪು ಮೂಡಿಸಿದ್ದರು. ಅವರ ಸಾಮರ್ಥ್ಯವು ಬೇಗನೆ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆದಿತ್ತು.
ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ ಆ್ಯರೊನ್ ಅವರು ಟಿವಿ ವೀಕ್ಷಕವಿವರಣೆಗಾರನಾಗಿ ಕೆಲಸ ಮಾಡುತ್ತಿದ್ದರು. ಇದೀಗ ಹೈದರಾಬಾದ್ ತಂಡದ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.







