50 ವರ್ಷಗಳಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಭಾರತದ ಹಿರಿಯ ಆಟಗಾರ ವರುಣ್ ಚಕ್ರವರ್ತಿ!

ವರುಣ್ ಚಕ್ರವರ್ತಿ | PTI
ಹೊಸದಿಲ್ಲಿ: ವರುಣ್ ಚಕ್ರವರ್ತಿ ರವಿವಾರ ಇತಿಹಾಸ ನಿರ್ಮಿಸಿದ್ದು, 50 ವರ್ಷಗಳಲ್ಲಿ ಮೊದಲ ಬಾರಿ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟಿಗೆ ಕಾಲಿರಿಸಿದ ಹಿರಿಯ ವಯಸ್ಸಿನ ಕ್ರಿಕೆಟಿಗ ಎನಿಸಿಕೊಂಡರು.
ಇಂಗ್ಲೆಂಡ್ ವಿರುದ್ಧ ಕಟಕ್ನಲ್ಲಿ ರವಿವಾರ 2ನೇ ಏಕದಿನ ಪಂದ್ಯ ಆರಂಭಕ್ಕೆ ಮೊದಲು 33ರ ಹರೆಯದ ಸ್ಪಿನ್ನರ್ ವರುಣ್ ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜರಿಂದ ಏಕದಿನ ಕ್ಯಾಪ್ ಸ್ವೀಕರಿಸಿದರು.
33 ವರ್ಷ, 164 ದಿನಗಳ ವರುಣ್ ಏಕದಿನ ಕ್ರಿಕೆಟಿಗೆ ಕಾಲಿಟ್ಟ ಭಾರತದ ಹಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದಾರೆ. 1974ರಲ್ಲಿ ಫಾರೂಖ್ ಇಂಜಿನಿಯರ್ 36 ವರ್ಷ, 138 ದಿನಗಳಲ್ಲಿ ತನ್ನ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. ಇಂಜಿನಿಯರ್ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಹಿರಿಯ ಕ್ರಿಕೆಟಿನೆಂಬ ದಾಖಲೆ ಉಳಿಸಿಕೊಂಡಿದ್ದಾರೆ.
2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮೂರು ಬದಲಾವಣೆಗಳನ್ನು ಮಾಡಿದ್ದು, ಜೇಕಬ್ ಬೆಥೆಲ್, ಬ್ರೆಂಡನ್ ಕಾರ್ಸ್ ಹಾಗೂ ಜೋಫ್ರಾ ಆರ್ಚರ್ ಬದಲಿಗೆ ಮಾರ್ಕ್ ವುಡ್, ಅಟ್ಕಿನ್ಸನ್ ಹಾಗೂ ಜಮೀ ಓವರ್ಟನ್ಗೆ ಅವಕಾಶ ನೀಡಲಾಗಿದೆ.
ಮೊದಲ ಪಂದ್ಯವನ್ನು ಜಯಿಸಿ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಭಾರತ ತಂಡ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಿದೆ. ಯಶಸ್ವಿ ಜೈಸ್ವಾಲ್ ಬದಲಿಗೆ ವಿರಾಟ್ ಕೊಹ್ಲಿ ವಾಪಸಾಗಿದ್ದಾರೆ. ಕುಲದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಚಕ್ರವರ್ತಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದಾರೆ.
ಭಾರತದ ಪರ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಐವರು ಹಿರಿಯ ಆಟಗಾರರು
1.ಫಾರೂಖ್ ಇಂಜಿನಿಯರ್-36 ವರ್ಷ, 138 ದಿನಗಳು(1974, ಇಂಗ್ಲೆಂಡ್ ವಿರುದ್ಧ)
2.ವರುಣ್ ಚಕ್ರವರ್ತಿ-33 ವರ್ಷ, 164 ದಿನಗಳು(2024-ಇಂಗ್ಲೆಂಡ್ ವಿರುದ್ಧ)
3.ಅಜಿತ್ ವಾಡೇಕರ್-33 ವರ್ಷ, 108 ದಿನಗಳು(1974, ಇಂಗ್ಲೆಂಡ್ ವಿರುದ್ಧ)
4. ದಿಲಿಪ್ ದೋಶಿ-32 ವರ್ಷ, 350 ದಿನಗಳು(1980, ಆಸ್ಟ್ರೇಲಿಯ ವಿರುದ್ಧ)
5. ಸಯ್ಯದ್ ಅಬಿದ್ ಅಲಿ-32 ವರ್ಷ, 307 ದಿನಗಳು(1974, ಇಂಗ್ಲೆಂಡ್ ವಿರುದ್ಧ)







