ಚಿನ್ನಾಸ್ವಾಮಿ ಸ್ಟೇಡಿಯಮ್ ನ ಗತ ವೈಭವ ಮರಳಿಸುತ್ತೇವೆ: ವೆಂಕಟೇಶ್ ಪ್ರಸಾದ್

ವೆಂಕಟೇಶ್ ಪ್ರಸಾದ್ | PC : PTI
ಬೆಂಗಳೂರು, ಆ. 21: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ಸಿಎ)ಗೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಚುನಾವಣೆಗಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಮತ್ತು ಕೆಎಸ್ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ್ ತಮ್ಮ ಪ್ರಣಾಳಿಕೆಯನ್ನು ಘೋಷಿಸಿದ್ದಾರೆ.
ನೂತನ ಕೆಎಸ್ಸಿಎ ಸಮಿತಿಯು ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಮ್ ನನೆಗುದಿಗೆ ಬೀಳುತ್ತಿರುವ ವಿಷಯವನ್ನು ನಿಭಾಯಿಸಬೇಕಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಈ ಸ್ಟೇಡಿಯಮ್ನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ಆ ಬಳಿಕ, ಸ್ಟೇಡಿಯಮ್ ಅನ್ನು ಪ್ರೇತಕಳೆ ಆವರಿಸಿದ್ದು, ಅಲ್ಲಿ ಪಂದ್ಯಗಳು ನಡೆಯುತ್ತಿಲ್ಲ.
ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಪಂದ್ಯಾವಳಿಯ ಆತಿಥ್ಯದ ಹಕ್ಕುಗಳನ್ನು ಚಿನ್ನಸ್ವಾಮಿ ಸ್ಟೇಡಿಯಮ್ ಕಳೆದುಕೊಂಡಿದೆ. ಇನ್ನು ಅದು 2025ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಪಂದ್ಯಗಳನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ.
‘‘ಎಮ್. ಚಿನ್ನಾಸ್ವಾಮಿ ಸ್ಟೇಡಿಯಮ್ ಗೆ ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಮರಳಿ ತರಲು ನಾವು ಬಯಸಿದ್ದೇವೆ. ಇದು ಅದ್ಭುತ ಮೈದಾನವಾಗಿದೆ. ಅದರ ಗತ ವೈಭವವನ್ನು ಮರಳಿ ತರಲು ನಾವು ಬಯಸಿದ್ದೇವೆ’’ ಎಂದು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಂಕಟೇಶ್ ಪ್ರಸಾದ್ ಹೇಳಿದರು.







