ಚಹಾಲ್ ಗೆ 4 ಓವರ್ ಕೋಟಾ ಪೂರ್ಣಗೊಳಿಸಲು ಅವಕಾಶ ನಿರಾಕರಿಸಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ವೆಂಕಟೇಶ್ ಪ್ರಸಾದ್

ಚಹಾಲ್, ವೆಂಕಟೇಶ್ ಪ್ರಸಾದ್. | Photo : PTI
ಹೊಸದಿಲ್ಲಿ: ವೆಸ್ಟ್ಇಂಡೀಸ್ ವಿರುದ್ಧದ 5 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಸತತ ಎರಡನೇ ಸೋಲು ಕಂಡಿರುವ ಭಾರತ ತಂಡವನ್ನು ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಟೀಕಿಸಿದ್ದಾರೆ. ಒಂದೇ ಓವರ್ ನಲ್ಲಿ ಎರಡು ವಿಕೆಟ್ ಪಡೆದಿದ್ದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ತನ್ನ 4 ಓವರ್ ಕೋಟಾ ಪೂರ್ಣಗೊಳಿಸದೇ ಇರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಗೆಲ್ಲುವ ಹಸಿವು ಇನ್ನೂ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದಾರೆ.
ವಿಂಡೀಸ್ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನು ಸೋತಾಗ ಭಾರತವನ್ನು ಸಾಮಾನ್ಯ ತಂಡ ಎಂದು ಕರೆದಿದ್ದ ಪ್ರಸಾದ್, ಇದೀಗ ಮತ್ತೊಂದು ಅದೇ ರೀತಿಯ ಟ್ವೀಟ್ ನಲ್ಲಿ ಭಾರತ ತಂಡದಲ್ಲಿನ ನಿರ್ದಿಷ್ಟ ಕೊರತೆಯನ್ನು ಬೆಟ್ಟು ಮಾಡಿದ್ದಾರೆ.
ತುಂಬಾನೇ ಕಳಪೆ ಪ್ರದರ್ಶನ ಇದಾಗಿದೆ. ಇದನ್ನು ತಳ್ಳಿಹಾಕುವುದರಲ್ಲಿ ಅರ್ಥವಿಲ್ಲ. 2007ರ ಟಿ-20 ವಿಶ್ವಕಪ್ ನಂತರ ಐಪಿಎಲ್ ಆರಂಭವಾಯಿತು. ಒಂದು ಬಾರಿ ಫೈನಲ್ ತಲುಪಿದ್ದು ಹೊರತುಪಡಿಸಿ 7 ಬಾರಿ ಪ್ರಯತ್ನಪಟ್ಟರೂ ನಾವು ಟ್ವೆಂಟಿ-20 ವಿಶ್ವಕಪ್ ಜಯಿಸಿಲ್ಲ. ಗೆಲ್ಲುವ ತೀವ್ರತೆ ಹಾಗೂ ಹಸಿವು ಇನ್ನೂ ಹೆಚ್ಚಾಗಿರಬೇಕು ಎಂದು ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ನಿನ್ನೆ ಲೆಗ್ ಸ್ಪಿನ್ನರ್ ಚಹಾಲ್ 16ನೇ ಓವರ್ನಲ್ಲಿ ಶಿಮ್ರಿನ್ ಹೆಟ್ಮೆಯರ್(22 ರನ್) ಹಾಗೂ ಜೇಸನ್ ಹೋಲ್ಡರ್(0)ವಿಕೆಟನ್ನು ಪಡೆದರು. ಆಗ ಭಾರತವು ಪಂದ್ಯದಲ್ಲಿ ಮರು ಹೋರಾಟ ನೀಡಿತ್ತು. 129 ರನ್ಗೆ ವಿಂಡೀಸ್ ತನ್ನ 8ನೇ ವಿಕೆಟ್ ಕಳೆದುಕೊಂಡಿತ್ತು. ವಿಂಡೀಸ್ 2 ಓವರ್ಗಳಲ್ಲಿ 12 ರನ್ ಗಳಿಸಬೇಕಾಗಿತ್ತು. ಆದರೆ ಚಹಾಲ್ ಮತ್ತೆ ಬೌಲಿಂಗ್ ಮಾಡಲಿಲ್ಲ. ವಿಂಡೀಸ್ನ 9ನೇ ಹಾಗೂ 10ನೇ ಕ್ರಮಾಂಕದ ಆಟಗಾರರು ವೇಗದ ಬೌಲರ್ಗಳನ್ನು ಸುಲಭವಾಗಿ ಎದುರಿಸಿದ್ದರು. ನಾಯಕ ಪಾಂಡ್ಯ 19ನೇ ಓವರ್ ಎಸೆಯಲು ಮುಕೇಶ್ ಕುಮಾರ್ ಗೆ ಅವಕಾಶ ನೀಡಿದರು.
19ನೇ ಓವರ್ನಲ್ಲಿ ವಿಂಡೀಸ್ ತಂಡ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆದ್ದುಕೊಂಡಿತು. ಇಂತಹ ಕ್ಷಣದಲ್ಲಿ ತುಂಬಾ ನಾಜೂಕಾಗಿರಬೇಕಾಗುತ್ತದೆ ಎಂದು ಪ್ರಸಾದ್ ಹೇಳಿದ್ದಾರೆ. ಭಾರತವು 2007ರಲ್ಲಿ ಟಿ-20 ವಿಶ್ವಕಪ್ ಅನ್ನು ಜಯಿಸಿದ ನಂತರ 2014ರಲ್ಲಿ ಫೈನಲ್ ತಲುಪಿದ್ದು ಭಾರತದ ಎರಡನೇ ಶ್ರೇಷ್ಠ ನಿರ್ವಹಣೆಯಾಗಿದೆ. ಆದರೆ ಫೈನಲ್ನಲ್ಲಿ ಶ್ರೀಲಂಕಾ ತಂಡಕ್ಕೆ ಸೋತಿತ್ತು. 2021ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಭಾರತವು ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಸೋತ ನಂತರ ಮೊದಲ ಸುತ್ತಿನಲ್ಲೇ ನಿರ್ಗಮಿಸಿತ್ತು. ಕಳೆದ ವರ್ಷ ಮತ್ತೊಮ್ಮೆ ಸೆಮಿ ಫೈನಲ್ ತಲುಪಿತ್ತು. ಆದರೆ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳಿಂದ ಸೋತಿತ್ತು.







