ವಿಂಬಲ್ಡನ್ ಚಾಂಪಿಯನ್ ಶಿಪ್ | ಸಿನಿಯಾಕೋವಾ, ವರ್ಬೀಕ್ ಗೆ ಮಿಶ್ರ ಡಬಲ್ಸ್ ಪ್ರಶಸ್ತಿ

ಝೆಕ್ನ ಕಟೆರಿನಾ ಸಿನಿಯಾಕೋವಾ ಹಾಗೂ ನೆದರ್ಲ್ಯಾಂಡ್ಸ್ನ ಸೆಮ್ ವರ್ಬೀಕ್ ವಿಂಬಲ್ಡನ್ | PC : @Wimbledon
ಲಂಡನ್: ಝೆಕ್ ನ ಕಟೆರಿನಾ ಸಿನಿಯಾಕೋವಾ ಹಾಗೂ ನೆದರ್ಲ್ಯಾಂಡ್ಸ್ ನ ಸೆಮ್ ವರ್ಬೀಕ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದಾರೆ.
ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಬ್ರಿಟನ್ ನ ಜೋ ಸಾಲಿಸ್ಬರಿ ಹಾಗೂ ಬ್ರೆಝಿಲ್ ನ ಲುಯಿಸಾ ಸ್ಟೆಫಾನಿ ಅವರನ್ನು 7-6(3), 7-6(3) ಸೆಟ್ ಗಳ ಅಂತರದಿಂದ ಮಣಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಸೆಂಟರ್ ಕೋರ್ಟ್ ನಲ್ಲಿ ಸ್ಥಳೀಯ ಫೇವರಿಟ್ ಗಳಾದ ಸಾಲಿಸ್ಬರಿ ಹಾಗೂ ಸ್ಟೆಫಾನಿ ಅವರನ್ನು ಎದುರಿಸಿದ ಝೆಕ್ ಹಾಗೂ ಡಚ್ ಜೋಡಿ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ 2 ಸೆಟ್ ಗಳನ್ನು ಟೈ-ಬ್ರೇಕರ್ ನಲ್ಲಿ ಗೆದ್ದುಕೊಂಡಿದೆ.
ಸಿನಿಯಾಕೋವಾ ಹಾಗೂ ವರ್ಬೀಕ್ ಇದೇ ಮೊದಲ ಬಾರಿ ಒಟ್ಟಿಗೆ ಪ್ರಶಸ್ತಿಯನ್ನು ಜಯಿಸಿದ್ದಾರೆ. ಸಿನಿಯಾಕೋವಾ ತನ್ನ ಚೊಚ್ಚಲ ಮಿಶ್ರ ಡಬಲ್ಸ್ ಗ್ರ್ಯಾನ್ ಸ್ಲಾಮ್ ಅನ್ನು ಗೆದ್ದುಕೊಂಡಿದ್ದಾರೆ. ವರ್ಬಿಕ್ ಇದೇ ಮೊದಲ ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದರು.
‘‘ಇದು ತುಂಬಾ ವಿಶೇಷವಾಗಿದೆ. ನನ್ನ ಪ್ರಕಾರ ಇದು ಬಹಳಷ್ಟು ಅರ್ಥಪೂರ್ಣವಾಗಿದೆ. ನಾವು ಟೆನಿಸ್ ಕೋರ್ಟ್ ನಲ್ಲಿ ಬಹಳಷ್ಟು ಆನಂದಿಸಿದ್ದೆವು. ಇದು ನಿಜವಾಗಿಯೂ ಅದ್ಭುತ ಸಮಯವಾಗಿತ್ತು’’ ಎಂದು ಟ್ರೋಫಿಯನ್ನು ಎತ್ತಿದ ನಂತರ ಸಿನಿಯಾಕೋವಾ ಹೇಳಿದರು.
29ರ ಹರೆಯದ ಸಿನಿಯಾಕೋವಾ ತನ್ನ 10 ಗ್ರ್ಯಾನ್ ಸ್ಲಾಮ್ ಮಹಿಳೆಯರ ಡಬಲ್ಸ್ ಪ್ರಶಸ್ತಿಗಳ ಪಟ್ಟಿಗೆ ಮತ್ತೊಂದು ಟ್ರೋಫಿ ಸೇರಿಸಿಕೊಂಡರು. ಸಿನಿಯಾಕೋವಾ ಜನವರಿಯಲ್ಲಿ ಅಮೆರಿಕದ ಟೇಲರ್ ಟೌನ್ಸೆಂಡ್ ಅವರೊಂದಿಗೆ ಆಸ್ಟ್ರೇಲಿಯದ ಓಪನ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಜಯಿಸಿದ್ದರು.







