ಇರಾನಿ ಕಪ್ : ಶೇಷ ಭಾರತ ಗೆಲುವಿಗೆ 361 ರನ್ ಗುರಿ

Photo : PTI
ನಾಗಪುರ, ಅ. 4: ನಾಗಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯಾವಳಿಯಲ್ಲಿ ವಿದರ್ಭ ತಂಡವು ಶನಿವಾರ ತನ್ನ ಸ್ಥಿತಿಯನ್ನು ಬಲಪಡಿಸಿಕೊಂಡಿದೆ. ಪಂದ್ಯದ 4ನೇ ದಿನದಂದು ಅದು ಮೊದಲು ಶೇಷ ಭಾರತದ ಗೆಲುವಿಗೆ 361 ರನ್ಗಳ ಗುರಿಯನ್ನು ನಿಗದಿಪಡಿಸಿತು ಹಾಗೂ ಬಳಿಕ, ಅದರ ಎರಡು ವಿಕೆಟ್ಗಳನ್ನು ಉರುಳಿಸಿತು.
2 ವಿಕೆಟ್ಗಳ ನಷ್ಟಕ್ಕೆ 96 ರನ್ನಿಂದ ತನ್ನ 2ನೇ ಇನಿಂಗ್ಸ್ನ್ನು ಶನಿವಾರ ಬೆಳಗ್ಗೆ ಮುಂದುವರಿಸಿದ ವಿದರ್ಭಕ್ಕೆ ಎದುರಾಳಿ ತಂಡದ ಬೌಲರ್ಗಳಾದ ಅಂಶುಲ್ ಕಾಂಬೋಜ್ ಮತ್ತು ಸಾರಾಂಶ್ ಜೈನ್ ತಡೆಯಾದರು. ಆದರೆ, ಕೆಳ-ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಉಪಯುಕ್ತ ಕೊಡುಗೆಯ ನೆರವಿನಿಂದ ಒಂದು ಹಂತದಲ್ಲಿ 105 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡಿದ್ದ ವಿದರ್ಭ ಅಂತಿಮವಾಗಿ ತನ್ನ 2ನೇ ಇನಿಂಗ್ಸ್ ಮೊತ್ತವನ್ನು 232 ರನ್ಗೆ ಏರಿಸುವಲ್ಲಿ ಯಶಸ್ವಿಯಾಯಿತು.
ವಿದರ್ಭ ನಾಯಕ ಅಕ್ಷಯ್ ವಾಡ್ಕರ್ 36 ರನ್ ಗಳಿಸಿದರೆ, ಹರ್ಷ ದುಬೆ 29 ಮತ್ತು ದರ್ಶನ್ ನಲ್ಕಂಡೆ 39 ರನ್ಗಳನ್ನು ಗಳಿಸಿದರು.
34 ರನ್ಗಳನ್ನು ನೀಡಿ 4 ವಿಕೆಟ್ಗಳನ್ನು ಉರುಳಿಸಿದ ಕಾಂಬೋಜ್ ಶೇಷ ಭಾರತ ತಂಡದ ಯಶಸ್ವಿ ಬೌಲರ್ ಎನಿಸಿದರು.
ಗೆಲುವಿಗೆ 361 ರನ್ಗಳ ಗುರಿಯನ್ನು ಬೆನ್ನಟ್ಟಿದ ಶೇಷ ಭಾರತ ತಂಡವು 4ನೇ ದಿನದಾಟದ ಕೊನೆಗೊಳ್ಳುವ ಮೊದಲೇ ತನ್ನ ಇಬ್ಬರೂ ಬ್ಯಾಟರ್ಗಳನ್ನು ಕಳೆದುಕೊಂಡಿತು. ಆರ್ಯನ್ ಜೂಯಲ್ರ ವಿಕೆಟನ್ನು ಆದಿತ್ಯ ಥಾಕರೆ ಉರುಳಿಸಿದರೆ, ಅಭಿಮನ್ಯು ಈಶ್ವರನ್ ವಿಕೆಟನ್ನು ಹರ್ಷ ದುಬೆ ಪಡೆದರು.
ಇಶಾನ್ ಕಿಶನ್ (5) ಮತ್ತು ರಜತ್ ಪಾಟೀದಾರ್ (2) ಕ್ರೀಸ್ನಲ್ಲಿದ್ದಾರೆ. 5ನೇ ಹಾಗೂ ಕೊನೆಯ ದಿನವಾದ ರವಿವಾರ ಗೆಲುವಿಗೆ ಶೇಷ ಭಾರತವು ಇನ್ನೂ 331 ರನ್ಗಳನ್ನು ಗಳಿಸಬೇಕಾಗಿದೆ. ವಿದರ್ಭವು ಈಗಾಗಲೇ 2017-18 ಮತ್ತು 2018-19ರಲ್ಲಿ ಇರಾನಿ ಕಪ್ ಟ್ರೋಫಿಯನ್ನು ಗೆದ್ದಿದೆ.
ಸಂಕ್ಷಿಪ್ತ ಸ್ಕೋರ್
ವಿದರ್ಭ ಮೊದಲ ಇನಿಂಗ್ಸ್ 342
ಶೇಷ ಭಾರತ ಮೊದಲ ಇನಿಂಗ್ಸ್ 214
ವಿದರ್ಭ ಎರಡನೇ ಇನಿಂಗ್ಸ್ 232
ಅಮನ್ ಮೋಖಡೆ 37, ಧ್ರುವ ಶೊರಿ 27, ಅಕ್ಷಯ್ ವಾಡ್ಕರ್ 36, ಹರ್ಷ ದುಬೆ 29, ದರ್ಶನ್ ನಲ್ಕಂಡೆ 35
ಅಂಶುಲ್ ಕಾಂಬೋಜ್ 4-34
ಶೇಷ ಭಾರತ ಎರಡನೇ ಇನಿಂಗ್ಸ್ 30-2
ಅಭಿಮನ್ಯು ಈಶ್ವರನ್ 17, ಇಶಾನ್ ಕಿಶನ್ (ಅಜೇಯ) 5, ರಜತ್ ಪಾಟೀದಾರ್ (ಅಜೇಯ) 2







