ವಿದರ್ಭದ ರಣಜಿ ಟ್ರೋಫಿ ವಿಜೇತ ನಾಯಕ ಫೈಝ್ ಫಝಲ್ ನಿವೃತ್ತಿ

ಫೈಝ್ ಫಝಲ್ |Photo: indiatoday.in
ಮುಂಬೈ: ವಿದರ್ಭ ತಂಡ 2018ರಲ್ಲಿ ಚೊಚ್ಚಲ ರಣಜಿ ಟ್ರೋಫಿಯನ್ನು ಗೆಲ್ಲುವಲ್ಲಿ ನಾಯಕತ್ವವಹಿಸಿದ್ದ ಫೈಝ್ ಫಝಲ್ ರವಿವಾರ ಹೇಳಿಕೆಯ ಮೂಲಕ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು.
ವಿದರ್ಭ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವುದು ದೊಡ್ಡ ಗೌರವ ಹಾಗೂ ಸೌಭಾಗ್ಯ. ನಾನು ಹಲವು ವರ್ಷಗಳ ಕಾಲ ಗಳಿಸಿರುವ ಅನುಭವ ಹಾಗೂ ಸವಿ ನೆನಪುಗಳಿಗೆ ಆಭಾರಿಯಾಗಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಆದರೆ ಇದು ನನ್ನ ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಸರಿಯಾದ ಹೆಜ್ಜೆ ಎಂಬ ವಿಶ್ವಾಸ ನನಗಿದೆ ಎಂದು ಫಝಲ್ ಹೇಳಿದ್ದಾರೆ.
ಆರಂಭಿಕ ಬ್ಯಾಟರ್ ಫಝಲ್ 2003ರ ಡಿಸೆಂಬರ್ ನಲ್ಲಿ ಜಮ್ಮು-ಕಾಶ್ಮೀರದ ವಿರುದ್ಧ ರಣಜಿ ಟ್ರೋಫಿ ಪ್ಲೇ ಗ್ರೂಪ್ ಪಂದ್ಯದಲ್ಲಿ ವಿದರ್ಭದ ಪರ 151 ರನ್ ಗಳಿಸಿದ್ದರು. ಇದು ಅವರ ಚೊಚ್ಚಲ ಪ್ರಥಮ ದರ್ಜೆ ಪಂದ್ಯವಾಗಿತ್ತು. ಆ ನಂತರ ದೇಶೀಯ ಕ್ರಿಕೆಟ್ ನಲ್ಲಿ ನಿರಂತರವಾಗಿ ಕಾಣಿಸಿಕೊಂಡ ಫಝಲ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 9,183 ರನ್, ಲಿಸ್ಟ್ ಎ ನಲ್ಲಿ 3, 641 ರನ್ ಹಾಗೂ ಟಿ20 ಕ್ರಿಕೆಟ್ ನಲ್ಲಿ 1,273 ರನ್ ಗಳಿಸಿದ್ದಾರೆ.
2015-16ರಲ್ಲಿ ಇರಾನಿ ಕಪ್ನಲ್ಲಿ 480 ರನ್ ಗುರಿ ಚೇಸ್ ಮಾಡಿದ್ದ ಶೇಷ ಭಾರತದ ಪರ 127 ರನ್ ಗಳಿಸಿ ಮುಂಬೈ ತಂಡವನ್ನು ಮಣಿಸಲು ನೆರವಾಗಿದ್ದರು. 2017-18ರ ರಣಜಿ ಟ್ರೋಫಿಯು ಫಝಲ್ಗೆ ಅತ್ಯಂತ ಸ್ಮರಣೀಯವಾಗಿದ್ದು, ವಿದರ್ಭ ತಂಡವು ಮೊದಲ ಬಾರಿ ಪ್ರಶಸ್ತಿ ಗೆಲ್ಲಲು ಸಾರಥ್ಯವಹಿಸಿದ್ದರು. ತಂಡದ ಪರ ಗರಿಷ್ಠ ರನ್ ಸ್ಕೋರರ್ ಆಗಿದ್ದರು. ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬ್ಲ್ಯೂ ಹಾಗೂ ಇಂಡಿಯಾ ಗ್ರೀನ್ ತಂಡದ ನಾಯಕನಾಗಿದ್ದರು.
ರಣಜಿ ಟ್ರೋಫಿಯಲ್ಲಿ ಹರ್ಯಾಣದ ವಿರುದ್ಧ ಫಝಲ್ ವಿದಾಯದ ಪಂದ್ಯವನ್ನಾಡಿದಾಗ ಎಲ್ಲ ಆಟಗಾರರು ಗೌರವ ರಕ್ಷೆ ನೀಡಿದರು. ವೃತ್ತಿಪರ ಕ್ರಿಕೆಟ್ ನಲ್ಲಿ 21 ವರ್ಷಗಳನ್ನು ಕಳೆದ ನಂತರ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.







