ಸಿರಾಜ್ ಫೀಲ್ಡಿಂಗ್ ಲೋಪದ ಬಗ್ಗೆ 'ಗಂಭೀರ' ಹತಾಶೆಯ ವಿಡಿಯೊ ವೈರಲ್

PC: x.com/CricketNDTV
ಲಂಡನ್: ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ನ ನಾಲ್ಕನೇ ದಿನ ಇಂಗ್ಲೆಂಡ್ ತಂಡದ ಎರಡನೇ ಇನಿಂಗ್ಸ್ ನಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಮೊಹ್ಮದ್ ಸಿರಾಜ್ ದೊಡ್ಡ ತಪ್ಪು ಮಾಡಿದರು. ಈ ಘಟನೆ ನಡೆದಾಗ ಬಲಗೈ ವೇಗಿ ಲಾಗ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು.
ಪ್ರಸಿದ್ಧ್ ಕೃಷ್ಣ ಅವರ 35ನೇ ಓವರ್ ನ ಮೊದಲ ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ ಟಾಪ್ ಎಡ್ಜ್ ಆದರು. ಇದು ಬೌಂಡರಿ ಗೆರೆ ಬಳಿ ಸುಲಭದ ಕ್ಯಾಚ್ ಆಗಿತ್ತು. ಸಿರಾಜ್ ಅದನ್ನು ಸರಿಯಾಗಿಯೇ ಹಿಡಿದರು. ಆದರೆ ಅಚ್ಚರಿ ಎಂಬಂತೆ ಸಿರಾಜ್ ಬೌಂಡರಿ ಗೆರೆಯ ರೋಪ್ ಮೇಲೆ ತಪ್ಪ ಬಲಗಾಲು ಇಟ್ಟ ಕಾರಣ ಅದನ್ನು ಸಿಕ್ಸರ್ ಎಂದು ಅಂಪೈರ್ ನಿರ್ಧರಿಸಿದರು.
ಈ ಪ್ರಮಾದದ ಬಗ್ಗೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹತಾಶರಾದ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚೆಂಡು ಗಾಳಿಯಲ್ಲಿ ಮೇಲೆದ್ದಾಗ ಪ್ರಸಿದ್ಧ್ ಕೃಷ್ಣ ವಿಕೆಟ್ ಪಡೆದ ಸಂಭ್ರಮಾಚರಣೆಯಲ್ಲಿ ತೊಡಗಿದರು. ಆದರೆ ಸಿರಾಜ್ ಈ ಅವಕಾಶವನ್ನು ವ್ಯರ್ಥಗೊಳಿಸಿದಾಗ ಪ್ರಸಿದ್ಧ್ ಕೃಷ್ಣ ತೀವ್ರ ಮುಜುಗರಕ್ಕೆ ಒಳಗಾದರು.
ಸಿರಾಜ್ ಹಾಗೂ ಸ್ಟೇಡಿಯಂನಲ್ಲಿದ್ದ ಭಾರತದ ಅಭಿಮಾನಿಗಳು ಆಘಾತಕ್ಕೆ ಒಳಗಾದರು. ಆಗ ಸಿರಾಜ್ ಅವರ ಸನಿಹದಲ್ಲಿ ಓಡಿ ಬಂದ ವಾಷಿಂಗ್ಟನ್ ಸುಂದರ್ ಅವರ ಮುಖದಲ್ಲೂ ಆಘಾತದ ಭಾವ ಇದ್ದುದನ್ನು ಮುಚ್ಚಿಡಲು ಸಾಧ್ಯವಾಗಲಿಲ್ಲ. ಈ ಅವಕಾಶ ವ್ಯರ್ಥವಾಗದೇ ಇದ್ದಲ್ಲಿ ಇಂಗ್ಲೆಂಡ್ ಸ್ಕೋರ್ 4 ವಿಕೆಟ್ ನಷ್ಟಕ್ಕೆ 137 ಆಗುತ್ತಿತ್ತು.







