ಶ್ರೀಶಾಂತ್ಗೆ ಕಪಾಳ ಮೋಕ್ಷ ಮಾಡಿದ್ದ ವೀಡಿಯೊ ಮತ್ತೆ ವೈರಲ್ | ಲಲಿತ್ ಮೋದಿ ವಿರುದ್ಧ ಹರ್ಭಜನ್ ಸಿಂಗ್ ಆಕ್ರೋಶ

PC : PTI
ಹೊಸದಿಲ್ಲಿ, ಸೆ.1: ಐಪಿಎಲ್ ಟೂರ್ನಿಯ ವೇಳೆ ಹರ್ಭಜನ್ ಸಿಂಗ್ ಅವರು ಎಸ್.ಶ್ರೀಶಾಂತ್ ಗೆ ಕಪಾಳ ಮೋಕ್ಷ ಮಾಡಿದ್ದ ಹಳೆಯ ವೀಡಿಯೊವನ್ನು ಇದೀಗ ಹಂಚಿಕೊಳ್ಳುವ ಮೂಲಕ ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿವಾದಕ್ಕೆ ಕಾರಣರಾಗಿದ್ದಾರೆ.
ಮೈಕಲ್ ಕ್ಲಾರ್ಕ್ ಅವರ ಬಿಯಾಂಡ್ 23 ಪೋಡ್ಕಾಸ್ಟ್ನಲ್ಲಿ ಈ ಬಗ್ಗೆ ಚರ್ಚಿಸಿದ ನಂತರ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊ ತುಣಕನ್ನು ಪೋಸ್ಟ್ ಮಾಡಿದ್ದರು. ಸುಮಾರು 18 ವರ್ಷಗಳ ಹಿಂದೆ ನಡೆದ ಘಟನೆಯ ವೀಡಿಯೊ ಈಗ ಮತ್ತೆ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ಶ್ರೀಶಾಂತ್ ಪತ್ನಿ ಹಾಗೂ ಹರ್ಭಜನ್ ಸಿಂಗ್ ಇಬ್ಬರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘‘ವೀಡಿಯೊ ಸೋರಿಕೆಯಾದ ರೀತಿ ತಪ್ಪು. ಅದು ಆಗಬಾರದಿತ್ತು. ಹಲವು ವರ್ಷಗಳ ನಂತರ ಈ ವೀಡಿಯೊ ಬಿಡುಗಡೆ ಮಾಡಿರುವ ಮೋದಿಯ ವೈಯಕ್ತಿಕ ಹಿತಾಸಕ್ತಿ ಇದರಲ್ಲಿರಬಹುದು. 18 ವರ್ಷಗಳ ಹಿಂದೆ ನಡೆದಿರುವ ಈ ಘಟನೆಯನ್ನು ಜನರು ಮರೆತ್ತಿದ್ದಾರೆ. ಇದೀಗ ಲಲಿತ್ ಮೋದಿ ಅದನ್ನು ಜನರಿಗೆ ನೆನಪಿಸುತ್ತಿದ್ದಾರೆ’’ ಎಂದು ಹರ್ಭಜನ್ ಹೇಳಿದ್ದಾರೆ.
ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಈ ಘಟನೆಯ ಬಗ್ಗೆ ಬಹಳ ಹಿಂದೆಯೇ ವಿಷಾದ ವ್ಯಕ್ತಪಡಿಸಿದ್ದಾರೆ. ಶ್ರೀಶಾಂತ್ ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಅಂದಿನಿಂದ ಇಬ್ಬರೂ ಆಟಗಾರರು ಮುನಿಸು ಮರೆತು ತಮ್ಮಷ್ಟಕ್ಕೆ ತಾವಿದ್ದಾರೆ.
‘‘ಈ ಹಿಂದೆ ನಡೆದ ಘಟನೆಯ ಬಗ್ಗೆ ನನಗೆ ಬೇಸರವಾಗುತ್ತಿದೆ. ತಪ್ಪುಗಳು ನಡೆದುಹೋಗಿದೆ. ಅದರ ಬಗ್ಗೆ ನಾಚಿಕೆಯಾಗುತ್ತಿದೆ’’ ಎಂದು ಹರ್ಭಜನ್ ಹೇಳಿದರು.
‘‘ವೀಡಿಯೊ ಮತ್ತೆ ವೈರಲ್ ಆಗಿದೆ. ಇದು ದುರದೃಷ್ಟಕರ ಘಟನೆ. ನಾನು ಅನೇಕ ಸಂದರ್ಭದಲ್ಲಿ ನನ್ನ ತಪ್ಪನ್ನು ಹೇಳಿದ್ದೇನೆ. ಮನುಷ್ಯ ತಪ್ಪು ಮಾಡುತ್ತಾನೆ, ನಾನು ಕೂಡ ತಪ್ಪು ಮಾಡಿದರೆ ನನ್ನನ್ನು ಕ್ಷಮಿಸುವಂತೆ ದೇವರಲ್ಲಿ ಕೇಳಿಕೊಂಡಿದ್ದೇನೆ’’ಎಂದು ಹರ್ಭಜನ್ ಹೇಳಿದರು.
ಐಪಿಎಲ್ ಆರಂಭಿಕ ವರ್ಷಗಳಲ್ಲಿ ಈ ವಿವಾದಾತ್ಮಕ ಘಟನೆ ನಡೆದಿದ್ದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಕ್ಷಣ ಇದಾಗಿತ್ತು. ಇಬ್ಬರೂ ಆಟಗಾರರು ಇದನ್ನು ಮರೆತು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ ವೀಡಿಯೊ ಮತ್ತೊಮ್ಮೆ ವೈರಲ್ ಆಗುವ ಮೂಲಕ ಅಹಿತಕರ ಘಟನೆ ಮತ್ತೊಮ್ಮೆ ನೆನಪಿಗೆ ಬಂದಿದೆ.







