ವಿಜಯ ಹಝಾರೆ ನಾಕೌಟ್ ಪಂದ್ಯಗಳಿಗೆ ಕೆ.ಎಲ್. ರಾಹುಲ್, ಪ್ರಸಿದ್ಧ ಕೃಷ್ಣ ಅಲಭ್ಯ

ಕೆ.ಎಲ್. ರಾಹುಲ್ | Photo Credit : PTI
ಬೆಂಗಳೂರು: ವಿಜಯ ಹಝಾರೆ ಟ್ರೋಫಿ ಪಂದ್ಯಾವಳಿಯ ನಾಕೌಟ್ ಸುತ್ತುಗಳಿಗೆ ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಕರ್ನಾಟಕ ತಂಡಕ್ಕೆ ಲಭಿಸುವುದಿಲ್ಲ. ಬ್ಯಾಟರ್ ರಾಹುಲ್ ಮತ್ತು ವೇಗಿ ಪ್ರಸಿದ್ಧ ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯಗಳಿಗಾಗಿ ಭಾರತೀಯ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಮೊದಲ ಏಕದಿನ ಪಂದ್ಯವು ರವಿವಾರ ವಡೋದರದಲ್ಲಿ ನಡೆಯಲಿದೆ.
ವಿಜಯ ಹಝಾರೆ ಟ್ರೋಫಿಯ ನಾಕೌಟ್ ಸುತ್ತಿನ ಪಂದ್ಯಗಳು ಸೋಮವಾರ ಇಲ್ಲಿ ಆರಂಭಗೊಳ್ಳಲಿವೆ.
ಟ್ರೋಫಿಯ ಗುಂಪು ಹಂತದಲ್ಲಿ ರಾಹುಲ್ ಎರಡು ಪಂದ್ಯಗಳಲ್ಲಿ ಆಡಿದರೆ, ಪ್ರಸಿದ್ಧ ಕೃಷ್ಣ ಮೂರು ಪಂದ್ಯಗಳಲ್ಲಿ ಆಡಿದ್ದಾರೆ.
ಕರ್ನಾಟಕದ ವಿಜಯ ಹಝಾರೆ ಟ್ರೋಫಿ ತಂಡದಲ್ಲಿ ಇಲ್ಲದಿದ್ದರೂ, ವೇಗದ ಬೌಲರ್ ವಿದ್ವತ್ ಕಾವೇರಪ್ಪ ನಾಕೌಟ್ ಸುತ್ತುಗಳಿಗೆ ಆಯ್ಕೆಗೆ ಲಭ್ಯರಿರುತ್ತಾರೆ ಎಂದು ಕರ್ನಾಟಕದ ಸೀನಿಯರ್ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಮಂಡಳಿಯ ಅಧ್ಯಕ್ಷ ಅಮಿತ್ ವರ್ಮಾ ಹೇಳಿದ್ದಾರೆ. ಕಾವೇರಪ್ಪ ಗುಂಪು ಹಂತದಲ್ಲಿ ಕರ್ನಾಟಕದ ಪರವಾಗಿ ಎರಡು ಪಂದ್ಯಗಳಲ್ಲಿ ಆಡಿದ್ದಾರೆ. ಬಳಿಕ ಅವರು ಆಡುವ ಹನ್ನೊಂದರ ತಂಡದಿಂದ ಹೊರಬಿದ್ದಿದ್ದರು.
ಎಡಗೈ ವೇಗಿ, ಹದಿಹರಯದ ಮಾಧವ್ ಬಜಾಜ್ರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಅಮಿತ್ ತಿಳಿಸಿದರು.
ಕರ್ನಾಟಕ ತಂಡ:
ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್ (ಉಪನಾಯಕ), ದೇವದತ್ತ ಪಡಿಕ್ಕಲ್, ಆರ್. ಸ್ಮರಣ್, ಕೆ.ಎಲ್. ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿ. ವೈಶಾಖ್, ಮನ್ವಂತ್ ಕುಮಾರ್, ಶ್ರೀಶ ಆಚಾರ್, ಅಭಿಲಾಶ್ ಶೆಟ್ಟಿ, ಬಿ.ಆರ್. ಶರತ್, ಹರ್ಷಿಲ್ ಧರ್ಮನಿ, ಧ್ರುವ ಪ್ರಭಾಕರ್, ವಿದ್ಯಾಧರ್ ಪಾಟೀಲ್.







