ವಿಜಯ ಹಝಾರೆ ಟ್ರೋಫಿ: ಮುಂಬೈ ಪರ ರೋಹಿತ್ ಆಡುವ ಸಾಧ್ಯತೆ

ರೋಹಿತ್ ಶರ್ಮಾ | Photo Credit : PTI
ಹೊಸದಿಲ್ಲಿ, ನ.12: ರೋಹಿತ್ ಶರ್ಮಾ ಅವರು 2025ರ ಡಿಸೆಂಬರ್ 24ರಿಂದ 2026ರ ಜನವರಿ 8ರ ನಡುವೆ ನಡೆಯಲಿರುವ ವಿಜಯ ಹಝಾರೆ ಟ್ರೋಫಿ ಗ್ರೂಪ್ ಹಂತದಲ್ಲಿ ಮುಂಬೈ ತಂಡದಲ್ಲಿ ಲಭ್ಯವಿರುವ ಸಾಧ್ಯತೆ ಇದೆ. ಮುಂಬೈ ತಂಡವು ‘ಸಿ’ ಗುಂಪಿನಲ್ಲಿ ಮಹಾರಾಷ್ಟ್ರ, ಪಂಜಾಬ್ ಹಾಗೂ ಗೋವಾ ತಂಡಗಳೊಂದಿಗೆ ಸ್ಥಾನ ಪಡೆದಿದ್ದು, ಪಂದ್ಯಗಳು ಜೈಪುರದಲ್ಲಿ ನಡೆಯಲಿದೆ.
ರಾಷ್ಟ್ರೀಯ ತಂಡದಲ್ಲಿ ಆಡದೇ ಇರುವ ಸಂದರ್ಭದಲ್ಲಿ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ಆಡಲೇಬೇಕು ಎಂದು ಬಿಸಿಸಿಐ ಈ ವರ್ಷಾರಂಭದಲ್ಲಿ ಕಡ್ಡಾಯಗೊಳಿಸಿತ್ತು.
ಭಾರತದ ಮಾಜಿ ನಾಯಕ ರೋಹಿತ್, ವಿಜಯ ಹಝಾರೆ ಟ್ರೋಫಿ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭಾಗವಹಿಸುವ ಕುರಿತು ನಮಗೆ ಅಧಿಕೃತವಾಗಿ ಮಾಹಿತಿ ಲಭಿಸಿಲ್ಲ. ಅವರು ಮುಂಬೈ ಪರ ಆಡಿದರೆ ನನಗೆ ತುಂಬಾ ಖುಷಿಯಾಗುತ್ತದೆ. ಅದರಿಂದ ನಮಗೆ ದೊಡ್ಡ ಲಾಭವಿದೆ ಎಂದು ಮುಂಬೈ ತಂಡದ ಮುಖ್ಯ ಆಯ್ಕೆಗಾರ ಸಂಜಯ ಪಾಟೀಲ್ ಹೇಳಿದ್ದಾರೆ.
ಒಂದು ವೇಳೆ ರೋಹಿತ್ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಲಭ್ಯವಿದ್ದರೆ ನಾಕೌಟ್ ಹಂತಗಳಲ್ಲಿ ಮಾತ್ರ ಆಡಲಿದ್ದಾರೆ. ಮುಷ್ತಾಕ್ ಅಲಿ ಟ್ರೋಫಿಯ ಗ್ರೂಪ್ ಲೀಗ್ ಗಳು ನವೆಂಬರ್ 26 ಹಾಗೂ ಡಿ.8ರ ಮಧ್ಯೆ ನಡೆಯಲಿದೆ. ನಾಕೌಟ್ ಪಂದ್ಯಗಳು ಇಂದೋರ್ ನಲ್ಲಿ ಡಿ.12ರಿಂದ 18ರ ತನಕ ನಡೆಯಲಿದೆ. ಗ್ರೂಪ್ ಹಂತದ ವೇಳೆ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಈ ವರ್ಷಾರಂಭದಲ್ಲಿ ಬಿಸಿಸಿಐ ಸೂಚನೆಯ ಮೇರೆಗೆ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ ಮುಂಬೈ ಹಾಗೂ ದಿಲ್ಲಿ ಪರವಾಗಿ ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದರು. ಸದ್ಯ ಈ ಇಬ್ಬರು ಆಟಗಾರರು ಏಕದಿನ ಪಂದ್ಯದಲ್ಲಿ ಮಾತ್ರ ಆಡುತ್ತಿದ್ದಾರೆ. ಇದೀಗ ಇಬ್ಬರು 2027ರ ಏಕದಿನ ವಿಶ್ವಕಪ್ ತನಕ ಮುಂದುವರಿಯಲು ಬಯಸಿದರೆ ವಿಜಯ ಹಝಾರೆ ಟ್ರೋಫಿಯಲ್ಲಿ ನಿರಂತರವಾಗಿ ಆಡಬೇಕಾಗುತ್ತದೆ.
ಜನವರಿ 11ರಿಂದ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಒಂದು ವೇಳೆ ರೋಹಿತ್ ಭಾರತೀಯ ತಂಡದಲ್ಲಿ ಆಡಿದರೆ, ಜನವರಿ 12ರಿಂದ ಆರಂಭವಾಗಲಿರುವ ವಿಜಯ ಹಝಾರೆ ಟೂರ್ನಿಯ ನಾಕೌಟ್ ಪಂದ್ಯಗಳಿಂದ ವಂಚಿತರಾಗಲಿದ್ದಾರೆ.
*ತನುಷ್ ಕೋಟ್ಯಾನ್ ವಾಪಸ್: ಮತ್ತೊಂದು ಬೆಳವಣಿಗೆಯಲ್ಲಿ ಸ್ಪಿನ್ನರ್ ತನುಷ್ ಕೋಟ್ಯಾನ್ ಪಾಂಡಿಚೇರಿ ತಂಡ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಮುಂಬೈ ತಂಡಕ್ಕೆ ವಾಪಸಾಗಿದ್ದಾರೆ.
ಭಾರತ ‘ಎ’ ತಂಡವನ್ನು ಪ್ರತಿನಿಧಿಸುತ್ತಿದ್ದ ಹಿನ್ನೆಲೆಯಲ್ಲಿ ಕೋಟ್ಯಾನ್ ಹಿಂದಿನ ಕೆಲವು ರಣಜಿ ಪಂದ್ಯಗಳನ್ನು ಆಡಿರಲಿಲ್ಲ. ಕೋಟ್ಯಾನ್ ಅನುಪಸ್ಥಿತಿಯಲ್ಲಿ ಹಿಮಾಂಶು ಸಿಂಗ್ ಅವರು ಅವಕಾಶ ಪಡೆದಿದ್ದರು.







