Vijay Hazare Trophy | ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ BCCI ಕೊಡುವ ವೇತನವೆಷ್ಟು?

ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ | Photo Credit : PTI
ಹೊಸದಿಲ್ಲಿ, ಡಿ. 27: ವಿಜಯ ಹಝಾರೆ ಟ್ರೋಫಿ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುತ್ತಿರುವುದು ಪಂದ್ಯಾವಳಿಗೆ ತಾರಾ ಮೆರುಗು ನೀಡಿದೆ. ಹಣದ ವ್ಯವಹಾರದಲ್ಲಿ ಈ ಪಂದ್ಯಾವಳಿಯು ಇಂಡಿಯನ್ ಪ್ರೀಮಿಯರ್ ಲೀಗ್ ನ (ಐಪಿಎಲ್) ಮಟ್ಟಕ್ಕೆ ಏರುವುದಿಲ್ಲವಾದರೂ, ಆಟಗಾರರ ವೇತನಕ್ಕೆ ಸ್ಪಷ್ಟ ನಿಯಮಗಳಿವೆ.
2025-26ರ ಸಾಲಿನಲ್ಲಿ ಓರ್ವ ಆಟಗಾರನ ವೇತನ ಅವರು ಎಷ್ಟು ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದಾರೆ ಎನ್ನುವುದನ್ನು ಅವಲಂಬಿಸಿದೆ. ಇಲ್ಲಿ ತಾರಾ ಪ್ರಭಾವಕ್ಕಿಂತಲೂ ಅನುಭವಕ್ಕೆ ಹೆಚ್ಚಿನ ಆದ್ಯತೆ. ಹಾಗಾಗಿ, ಕೊಹ್ಲಿ ಮತ್ತು ರೋಹಿತ್ ಗರಿಷ್ಠ ವೇತನದ ವ್ಯಾಪ್ತಿಯಲ್ಲಿ ಬರುತ್ತಾರೆ.
40ಕ್ಕಿಂತ ಹೆಚ್ಚಿನ ಲಿಸ್ಟ್ ಎ ಪಂದ್ಯಗಳಲ್ಲಿ ಆಡಿರುವ ಆಟಗಾರರು ಸೀನಿಯರ್ ವಿಭಾಗದಲ್ಲಿ ಬರುತ್ತಾರೆ. ಅವರು ಆಡುವ 11ರ ತಂಡದ ಭಾಗವಾಗಿದ್ದರೆ ಪಂದ್ಯವೊಂದಕ್ಕೆ 60,000 ರೂ. ವೇತನ ಪಡೆಯುತ್ತಾರೆ. ಮೀಸಲು ಆಟಗಾರರ ಪಟ್ಟಿಯಲ್ಲಿದ್ದರೆ 30,000 ರೂ. ಪಡೆಯುತ್ತಾರೆ. 21ರಿಂದ 40 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದವರು ಮಧ್ಯಮ ವಿಭಾಗದಲ್ಲಿ ಬರುತ್ತಾರೆ. ಈ ವಿಭಾಗದಲ್ಲಿ ಆಡುವ 11ರ ತಂಡದಲ್ಲಿರುವ ಆಟಗಾರರು 50,000 ರೂ. ಪಡೆದರೆ, ಮೀಸಲು ಪಟ್ಟಿಯಲ್ಲಿರುವವರು 25,000 ರೂ. ಸ್ವೀಕರಿಸುತ್ತಾರೆ.
20 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದವರು ಜೂನಿಯರ್ ವಿಭಾಗದಲ್ಲಿ ಬರುತ್ತಾರೆ. ಈ ವಿಭಾಗದಲ್ಲಿ ಆಡುವ 11ರ ತಂಡದಲ್ಲಿರುವವರು ಪ್ರತೀ ಪಂದ್ಯಕ್ಕೆ 40,000 ರೂ. ಮತ್ತು ಮೀಸಲು ಆಟಗಾರರು 20,000 ರೂ. ವೇತನ ಪಡೆಯುತ್ತಾರೆ.
ಹಾಗಾಗಿ, ವಿಜಯ್ ಹಝಾರೆ ಟ್ರೋಫಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಪ್ರತೀ ಪಂದ್ಯಕ್ಕೆ 60,000 ರೂ. ಪಡೆಯುತ್ತಾರೆ. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅವರಿಗೆ ಪ್ರತೀ ಅಂತರ್ರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಆರು ಲಕ್ಷ ರೂ. ಪಾವತಿಸುತ್ತದೆ.







