ವಿಜಯ್ ಹಝಾರೆ ಟ್ರೋಫಿ| ಲಿಸ್ಟ್ ಎ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಗಳಿಸಿದ ಧ್ರುವ ಜುರೆಲ್

ಧ್ರುವ ಜುರೆಲ್ | Photo Credit : X
ರಾಜ್ಕೋಟ್, ಡಿ.29: ಬರೋಡ ತಂಡ ವಿರುದ್ಧದ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ಭಾರತೀಯ ವಿಕೆಟ್ಕೀಪರ್-ಬ್ಯಾಟರ್ ಧ್ರುವ ಜುರೆಲ್ ಉತ್ತರ ಪ್ರದೇಶದ ಪರ ತನ್ನ ಚೊಚ್ಚಲ ಲಿಸ್ಟ್ ಎ ಶತಕ ಗಳಿಸಿದರು.
ಸೋಮವಾರ ನಡೆದ ಪಂದ್ಯದಲ್ಲಿ ಜುರೆಲ್ ಕೇವಲ 78 ಎಸೆತಗಳಲ್ಲಿ ತನ್ನ ಶತಕ ತಲುಪಿದರು. ಔಟಾಗದೆ 160 ರನ್ ಗಳಿಸಿ ಉತ್ತರ ಪ್ರದೇಶ ತಂಡವು 7 ವಿಕೆಟ್ಗಳ ನಷ್ಟಕ್ಕೆ 369 ರನ್ ಗಳಿಸುವಲ್ಲಿ ನೆರವಾದರು.
24ರ ವಯಸ್ಸಿನ ಜುರೆಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು, ಬರೋಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿ 15 ಬೌಂಡರಿ ಹಾಗೂ 8 ಸಿಕ್ಸರ್ಗಳನ್ನು ಸಿಡಿಸಿದರು. ಜುರೆಲ್ ಅವರು 2025-26ರ ಸಾಲಿನ ವಿಎಚ್ಟಿ ಅಭಿಯಾನವನ್ನು ತನ್ನದೇ ಶೈಲಿಯಲ್ಲಿ ಆರಂಭಿಸಿದ್ದು, ಇಂದು ಶತಕ ಗಳಿಸುವ ಮೊದಲು ಮೊದಲೆರಡು ಸುತ್ತಿನ ಪಂದ್ಯಗಳಲ್ಲಿ ಹೈದರಾಬಾದ್ ಹಾಗೂ ಚಂಡಿಗಡ ವಿರುದ್ಧ ಅರ್ಧಶತಕಗಳನ್ನು ಗಳಿಸಿದ್ದರು.
ಉತ್ತರಪ್ರದೇಶ ಜಯಭೇರಿ: ಗೆಲ್ಲಲು 370 ರನ್ ಗುರಿ ಪಡೆದಿದ್ದ ಬರೋಡ ತಂಡ 50 ಓವರ್ಗಳಲ್ಲಿ 315 ರನ್ ಗಳಿಸಿ ಆಲೌಟಾಯಿತು. 54 ರನ್ಗಳ ಅಂತರದಿಂದ ಸೋಲನುಭವಿಸಿತು. ಸತತ ಮೂರನೇ ಗೆಲುವು ಪಡೆದಿರುವ ಉತ್ತರಪ್ರದೇಶ ತಂಡವು ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ಉತ್ತರಪ್ರದೇಶದ ಪರ ಝೀಶನ್ ಅನ್ಸಾರಿ(3-53)ಮೂರು ವಿಕೆಟ್ ಪಡೆದು ಮಿಂಚಿದರು. ಸಮೀರ್ ರಿಝ್ವಿ(2-43)ಹಾಗೂ ವಿಪ್ರಜ್ ನಿಗಮ್(2-67)ತಲಾ ಎರಡು ವಿಕೆಟ್ಗಳನ್ನು ಪಡೆದರು.
ಬರೋಡ ತಂಡದ ಪರ ನಾಯಕ ಕೃನಾಲ್ ಪಾಂಡ್ಯ(82 ರನ್, 77 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಶಾಶ್ವತ್ ರಾವತ್(60 ರನ್, 69 ಎಸೆತ), ಅತೀತ್ ಶೇಟ್(46 ರನ್, 28 ಎಸೆತ) ಹಾಗೂ ವಿಷ್ಣು ಸೋಲಂಕಿ(43 ರನ್, 39 ಎಸೆತ)ಒಂದಷ್ಟು ಪ್ರತಿರೋಧ ಒಡ್ಡಿದರು.
ಉತ್ತರಪ್ರದೇಶದ ಬ್ಯಾಟಿಂಗ್ನಲ್ಲಿ ಜುರೆಲ್ ಶತಕ ಗಳಿಸಿದರೆ, ನಾಯಕ ರಿಂಕು ಸಿಂಗ್(63 ರನ್, 67 ಎಸೆತ), ಆರಂಭಿಕ ಬ್ಯಾಟರ್ ಅಭಿಷೇಕ್ ಗೋಸ್ವಾಮಿ(51 ರನ್, 51 ಎಸೆತ)ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು 369ಕ್ಕೆ ತಲುಪಿಸಿದರು. ಬರೋಡದ ಪರ ರಾಜ್ ಲಿಂಬಾನಿ(4-74)ನಾಲ್ಕು ವಿಕೆಟ್ ಗೊಂಚಲು ಪಡೆದರು.
ಮುಂಬೈ ತಂಡಕ್ಕೆ ಸುಲಭ ಜಯ
ವೇಗದ ಬೌಲರ್ ಶಾರ್ದುಲ್ ಠಾಕೂರ್ (4-13)ಹಾಗೂ ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ(5-31) ಅಮೋಘ ಬೌಲಿಂಗ್ ನೆರವಿನಿಂದ ಮುಂಬೈ ತಂಡವು ಸೋಮವಾರ ನಡೆದ ವಿಜಯ್ ಹಝಾರೆ ಟ್ರೋಫಿಯ ‘ಸಿ’ ಗುಂಪಿನ ಪಂದ್ಯದಲ್ಲಿ ಛತ್ತೀಸ್ಗಡ ತಂಡವನ್ನು 9 ವಿಕೆಟ್ಗಳ ಅಂತರದಿಂದ ಸುಲಭವಾಗಿ ಸೋಲಿಸಿದೆ.
ಟಾಸ್ ಜಯಿಸಿದ ಮುಂಬೈ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ ಓವರ್ನಲ್ಲಿ ಎರಡು ವಿಕೆಟ್ ಪಡೆದ ಶಾರ್ದುಲ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಅಶುತೋಶ್ ಸಿಂಗ್ ವಿಕೆಟನ್ನು ಪಡೆದ ಶಾರ್ದುಲ್ 9 ರನ್ಗೆ 3ನೇ ವಿಕೆಟ್ ಪಡೆದರು. ಐದು ಓವರ್ನೊಳಗೆ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡ ಛತ್ತೀಸ್ಗಡ ಆರಂಭಿಕ ಆಘಾತ ಅನುಭವಿಸಿತು.ನಾಯಕ ಅಮನ್ದೀಪ್ ಖಾರೆ ಹಾಗೂ ಅಜಯ್ ಮಂಡಲ್ ಐದನೇ ವಿಕೆಟ್ಗೆ 105 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಕೇವಲ 37 ರನ್ ಗೆ ಕೊನೆಯ ಐದು ವಿಕೆಟ್ಗಳನ್ನು ಕಳೆದುಕೊಂಡ ಛತ್ತೀಸ್ಗಡ 38.1 ಓವರ್ಗಳಲ್ಲಿ 142 ರನ್ಗೆ ಆಲೌಟಾಯಿತು. ಗೆಲ್ಲಲು 143 ರನ್ ಗುರಿ ಪಡೆದ ಮುಂಬೈ ತಂಡವು 24 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಎ.ರಘುವಂಶಿ(ಔಟಾಗದೆ 68, 66 ಎಸೆತ)ಹಾಗೂ ಸಿದ್ದೇಶ್ ಲಾಡ್(ಔಟಾಗದೆ 48, 42 ಎಸೆತ)ಮುಂಬೈಗೆ ಸುಲಭ ಗೆಲುವು ತಂದುಕೊಟ್ಟರು.







