Vijay hazare trophy | ಉಳಿದ ಪಂದ್ಯಗಳಿಗೆ ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕ

ಶ್ರೇಯಸ್ ಅಯ್ಯರ್ | Photo Credit : NDTV
ಮುಂಬೈ, ಜ. 5: ಮೀನಖಂಡದ ಗಾಯದಿಂದ ಬಳಲುತ್ತಿರುವ ಶಾರ್ದುಲ್ ಠಾಕೂರ್ ವಿಜಯ ಹಝಾರೆ ಟ್ರೋಫಿಯ ಉಳಿದ ಪಂದ್ಯಗಳಿಗೆ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ, ಆ ಪಂದ್ಯಗಳಲ್ಲಿ ಮುಂಬೈ ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ವಹಿಸಲಿದ್ದಾರೆ.
ಮುಂಬೈ ತಂಡಕ್ಕೆ ಸೋಮವಾರ ಸೇರ್ಪಡೆಗೊಂಡಿರುವ ಶ್ರೇಯಸ್ ಜೈಪುರಿಯ ವಿದ್ಯಾಲಯ ಮೈದಾನದಲ್ಲಿ ಕೋಚ್ ಗಳಾದ ಓಂಕಾರ್ ಸಲ್ವಿ ಮತ್ತು ಅತುಲ್ ರಾನಡೆ ಅವರ ಉಸ್ತುವಾರಿಯಲ್ಲಿ ಸುದೀರ್ಘ ಅಭ್ಯಾಸ ನಡೆಸಿದರು.
ಶ್ರೇಯಸ್ ವೇಗದ ಬೌಲರ್ಗಳ ವಿರುದ್ಧ ಸುಲಲಿತವಾಗಿ ಬ್ಯಾಟಿಂಗ್ ಮಾಡಿದರು ಮತ್ತು ಸ್ವಲ್ಪ ಕ್ಯಾಚ್ ಹಿಡಿಯುವ ಅಭ್ಯಾಸವನ್ನೂ ನಡೆಸಿದರು.
‘‘ಶಾರ್ದುಲ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕೊನೆಯ ಎರಡು ಗುಂಪು ಲೀಗ್ ಪಂದ್ಯಗಳಲ್ಲಿ ತಂಡದ ನಾಯಕತ್ವವನ್ನು ಶ್ರೇಯಸ್ ವಹಿಸುವುದಾಗಿ ನಿರ್ಧರಿಸಲಾಗಿದೆ’’ ಎಂದು ಮುಂಬೈ ತಂಡದ ಮುಖ್ಯ ಆಯ್ಕೆಗಾರ ಸಂಜಯ್ ಪಾಟೀಲ್ ‘ಸ್ಪೋರ್ಟ್ಸ್ಸ್ಟಾರ್’ಗೆ ತಿಳಿಸಿದರು.
ವಿಜಯ ಹಝಾರೆ ಟ್ರೋಫಿ ಲೀಗ್ ಪಂದ್ಯಗಳಲ್ಲಿ ಮುಂಬೈ ತಂಡವು ಇನ್ನು ಹಿಮಾಚಲಪ್ರದೇಶ ಮತ್ತು ಪಂಜಾಬ್ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲಿ, ಭಾರತೀಯ ಟಿ20 ತಂಡದ ನಾಯಕ ಸೂರ್ಯಕುಮಾರ್ ಆಡುವ ನಿರೀಕ್ಷೆಯಿದೆ. ಆದರೂ, ಈಗ ಭಾರತೀಯ ಏಕದಿನ ತಂಡದ ಉಪನಾಯಕನಾಗಿರುವ ಶ್ರೇಯಸ್ಗೆ ಮುಂಬೈ ತಂಡದ ನಾಯಕನ ಜವಾಬ್ದಾರಿಯನ್ನು ನೀಡಲು ಮುಂಬೈ ಆಯ್ಕೆಗಾರರು ನಿರ್ಧರಿಸಿದರು.







